- Kannada News Photo gallery Cricket photos IND vs AUS 3rd T20I Rohit Sharma Lead India will take on Australia in the series decider
IND vs AUS: ಹೈವೋಲ್ಟೇಜ್ ಪಂದ್ಯಕ್ಕೆ ಭಾರತ ರೆಡಿ: ರೋಹಿತ್ ಪಡೆಯಿಂದ ಭರ್ಜರಿ ಅಭ್ಯಾಸ
India vs Australia: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಿರ್ಣಾಯಕ ಮೂರನೇ ಟಿ20 ಪಂದ್ಯ ಇಂದು ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
Updated on: Sep 25, 2022 | 11:29 AM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಿರ್ಣಾಯಕ ಮೂರನೇ ಟಿ20 ಪಂದ್ಯ ಇಂದು ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ, ದ್ವಿತೀಯ ಸೆಣೆಸಾಟದಲ್ಲಿ ಭಾರತ 6 ವಿಕೆಟ್ ಗಳ ಜಯ ಸಾಧಿಸಿತ್ತು. ಹೀಗಾಗಿ ಕೊನೆಯ ಟಿ20 ಮೇಲೆ ಎಲ್ಲರ ಕಣ್ಣಿದೆ.

ಹಿಂದಿನ ಎರಡೂ ಪಂದ್ಯಗಳಲ್ಲಿ ರೋಹಿತ್ ಪಡೆ ವೈಫಲ್ಯ ಅನುಭವಿಸಿದ್ದು ಬೌಲಿಂಗ್ ನಲ್ಲಿ. ಅದರಲ್ಲೂ ಮುಖ್ಯವಾಗಿ ವೇಗಿಗಳು. ಪದೇ ಪದೇ ದುಬಾರಿಯಾಗುತ್ತಿರುವ ಟೀಮ್ ಇಂಡಿಯಾ ವೇಗಿಗಳು ಆದಷ್ಟು ಬೇಗ ಲಯಕಂಡುಕೊಳ್ಳಬೇಕಿದೆ. ಟಿ20 ವಿಶ್ವಕಪ್ ಗೂ ಮುನ್ನ ಭಾರತಕ್ಕೆ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟಲು ಇಂದಿನ ಪಂದ್ಯ ಮಹತ್ವದ್ದಾಗಿದೆ. ಹೀಗಾಗಿ ಭಾರತ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ.

ಮೊದಲ ಟಿ20 ಪಂದ್ಯದಲ್ಲಿ ದುಬಾರಿಯಾದ ಉಮೇಶ್ ಯಾದವ್ ಎರಡನೇ ಕದನದಿಂದ ಹೊರಗುಳಿದು ಜಸ್ ಪ್ರೀತ್ ಬುಮ್ರಾ ಸ್ಥಾನ ಪಡೆದು ಮಾರಕವಾಗಿ ಪರಿಣಮಿಸಿದರು. ಆದರೆ, ಎರಡನೇ ಟಿ20 ಯಲ್ಲಿ ಹರ್ಷಲ್ ಪಟೇಲ್ ದುಬಾರಿ ಆದರು. ಹೀಗಾಗಿ ಹರ್ಷಲ್ ಜಾಗಕ್ಕೆ ದೀಪಕ್ ಚಹರ್ ಬರುವ ಸಾಧ್ಯತೆ ಇದೆ.

ಅಂತೆಯೆ ಯುಜ್ವೇಂದ್ರ ಚಹಲ್ ಸ್ಥಾನ ಕೂಡ ತುಗುಯ್ಯಾಲೆಯಲ್ಲಿದೆ. ಕಳೆದ ಏಷ್ಯಾಕಪ್ ನಿಂದಲೂ ಚಹಲ್ ಸ್ನಿನ್ ಮೋಡಿ ನಡೆಯುತ್ತಿಲ್ಲ. ವಿಕೆಟ್ ಕೀಳಲು ಪರದಾಡುತ್ತಿದ್ದಾರೆ. ಇವರ ಜಾಗದಲ್ಲಿ ರವಿಚಂದ್ರನ್ ಅಶ್ವಿನ್ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ಅತ್ತ ಅಕ್ಷರ್ ಪಟೇಲ್ ಬೊಂಬಾಟ್ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ಭಾರತದ ಬ್ಯಾಟರ್ ಗಳು ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಒಬ್ಬರು ವೈಫಲ್ಯ ಅನುಭವಿಸಿದರೂ ಮತ್ತೊಬ್ಬರು ಜವಾಬ್ದಾರಿ ವಹಿಸಿ ರನ್ ವೇಗವನ್ನು ಹೆಚ್ಚಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಫೇಲ್ ಆದರೂ, ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯಾ ರನ್ ಗಳಿಸುತ್ತಾರೆ.

ದಿನೇಶ್ ಕಾರ್ತಿಕ್ ಫಿನಿಶಿಂಗ್ ಕೆಲಸವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ರಿಷಭ್ ಪಂತ್ಗೆ ಇನ್ನೂ ಮಿಂಚಲು ಅವಕಾಶ ಸಿಗಲಿಲ್ಲ.

ಬ್ಯಾಟಿಂಗ್ ಅಭ್ಯಾಸದಲ್ಲಿ ನಿರತರಾಗಿರುವ ಕೆಎಲ್ ರಾಹುಲ್.

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್/ ಆರ್. ಅಶ್ವಿನ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ.




