- Kannada News Photo gallery Cricket photos IND vs BAN: Abhishek Sharma and Sanju Samson will open for Team India
IND vs BAN: ಟೀಮ್ ಇಂಡಿಯಾಗೆ ಹೊಸ ಆರಂಭಿಕರು
IND vs BAN: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ಅಕ್ಟೋಬರ್ 6 ರಂದು ಗ್ವಾಲಿಯರ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಹೊಸ ಆರಂಭಿಕರು ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಟೆಸ್ಟ್ ತಂಡದಲ್ಲಿರುವ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಹೀಗಾಗಿ ಈ ಸರಣಿಗೆ ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ.
Updated on: Oct 06, 2024 | 8:10 AM

ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ಇಂದು (ಅ.6) ನಡೆಯಲಿದೆ. ಗ್ವಾಲಿಯರ್ನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಹೊಸ ಆರಂಭಿಕರು ಕಣಕ್ಕಿಳಿಯಲಿದ್ದಾರೆ.

ಟೀಮ್ ಇಂಡಿಯಾದ ಖಾಯಂ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಪರ ಹೊಸ ಆರಂಭಿಕರು ಇನಿಂಗ್ಸ್ ಆರಂಭಿಸಲಿದ್ದಾರೆ.

ಅದರಂತೆ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಯಾಮ್ಸನ್ ಹಾಗೂ ಅಭಿಷೇಕ್ ಇರಲಿರುವುದನ್ನು ಖಚಿತಪಡಿಸಿರುವ ನಾಯಕ ಸೂರ್ಯಕುಮಾರ್ ಯಾದವ್, ಮೊದಲ ಪಂದ್ಯದಲ್ಲಿ ಇವರಿಬ್ಬರೇ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಈ ಹಿಂದೆ ಕೂಡ ಟೀಮ್ ಇಂಡಿಯಾ ಪರ ಓಪನರ್ಗಳಾಗಿ ಕಾಣಿಸಿಕೊಂಡಿದ್ದರು. ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಯುವ ಎಡಗೈ ದಾಂಡಿಗ ಅಭಿಷೇಕ್ 2 ಮ್ಯಾಚ್ಗಳಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿದ್ದರು. ಈ ವೇಳೆ ಒಂದು ಭರ್ಜರಿ ಶತಕವನ್ನು ಸಹ ಸಿಡಿಸಿದ್ದಾರೆ. ಹಾಗೆಯೇ ಸ್ಯಾಮ್ಸನ್ 5 ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದು, ಒಂದು ಅರ್ಧಶತಕದೊಂದಿಗೆ ಒಟ್ಟು 105 ರನ್ ಕಲೆಹಾಕಿದ್ದಾರೆ.

ಇದೀಗ ಪ್ರಮುಖ ಆಟಗಾರರ ಅನುಪಸ್ಥಿತಿಯೊಂದಿಗೆ ಟೀಮ್ ಇಂಡಿಯಾ ಪರ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯಲು ಸಂಜು ಸ್ಯಾಮ್ಸನ್ ಸಜ್ಜಾಗಿದ್ದಾರೆ. ಅವರೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಕೂಡ ಬ್ಯಾಟ್ ಬೀಸಲು ರೆಡಿಯಾಗಿ ನಿಂತಿದ್ದಾರೆ. ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಕಡೆಯಿಂದ ಸ್ಪೋಟಕ ಆರಂಭವನ್ನು ನಿರೀಕ್ಷಿಸಬಹುದು.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್(ನಾಯಕ) ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್.
























