- Kannada News Photo gallery Cricket photos IND vs ENG 4th Test: Nitish Kumar Reddy, Akash Deep, Arshdeep Singh ruled out of fourth Test
IND vs ENG: ಇಂದಿನಿಂದ 4ನೇ ಟೆಸ್ಟ್ ಶುರು: ಟೀಮ್ ಇಂಡಿಯಾದ ಮೂವರು ಅಲಭ್ಯ
IND vs ENG 4th Test: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-1 ಅಂತರದಿಂದ ಮುನ್ನಡೆ ಹೊಂದಿದ್ದು, ಹೀಗಾಗಿ ಮ್ಯಾಚೆಂಸ್ಟರ್ನಲ್ಲಿ ಭಾರತ ತಂಡ ಗೆಲ್ಲುವುದು ಅಥವಾ ಡ್ರಾ ಸಾಧಿಸುವುದು ಅನಿವಾರ್ಯ. ಆದರೆ ಈ ನಿರ್ಣಾಯಕ ಪಂದ್ಯಕ್ಕೆ ಟೀಮ್ ಇಂಡಿಯಾದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ.
Updated on:Jul 23, 2025 | 7:14 AM

India vs England 4th Test: ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 23) ಶುರುವಾಗಲಿದೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಬಳಿಕ ನಡೆದ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರ ಕೈಗೆ ಗಾಯವಾಗಿದ್ದು, ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲೂ ಅವರು ಕಾಣಿಸಿಕೊಳ್ಳುವುದಿಲ್ಲ.

ಇನ್ನು ಬರ್ಮಿಂಗ್ಹ್ಯಾಮ್ ಟೆಸ್ಟ್ನ ಗೆಲುವಿನ ರೂವಾರಿಗಳಲ್ಲಿ ಒಬ್ಬರಾಗಿರುವ ಆಕಾಶ್ ದೀಪ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದ 4ನೇ ದಿನದಾಟದಂದು ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 8 ಓವರ್ಗಳನ್ನು ಮಾತ್ರ ಎಸೆದಿದ್ದರು. ಇತ್ತ ಫಿಟ್ನೆಸ್ ಸಮಸ್ಯೆಗೆ ಒಳಗಾಗಿರುವ ಅವರು 4ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ತಿಳಿಸಿದ್ದಾರೆ.

ಹಾಗೆಯೇ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಜಿಮ್ನಲ್ಲಿನ ತರಬೇತಿ ವೇಳೆ ಅವರ ಮೊಣಕಾಲಿಗೆ ಗಾಯವಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರು ಹೊರಬಿದ್ದಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಿತೀಶ್ ಕುಮಾರ್ ಕೂಡ ಅಲಭ್ಯರಾಗಲಿದ್ದಾರೆ.

ಇತ್ತ ಮೂವರ ಅಲಭ್ಯತೆಯ ನಡುವೆ ಟೀಮ್ ಇಂಡಿಯಾಗೆ ಯುವ ವೇಗಿಯ ಎಂಟ್ರಿಯಾಗಿದೆ. ಈ ಹಿಂದೆ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದ ಹರ್ಯಾಣದ ಬಲಗೈ ವೇಗಿ ಅನ್ಶುಲ್ ಕಂಬೋಜ್ ಅವರನ್ನು ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಇತ್ತ ಆಕಾಶ್ ದೀಪ್ ಹಾಗೂ ಅರ್ಷದೀಪ್ ಸಿಂಗ್ ಅಲಭ್ಯತೆಯ ನಡುವೆ ಅನ್ಶುಲ್ಗೆ ಆಡುವ ಬಳಗದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಅನ್ಶುಲ್ ಕಂಬೋಜ್.
Published On - 7:13 am, Wed, 23 July 25




