IND vs ENG: ವಿಶಾಖಪಟ್ಟಣಂನಲ್ಲಿ ನಾಯಕ ರೋಹಿತ್ ಶರ್ಮಾ ದಾಖಲೆ ಹೇಗಿದೆ ಗೊತ್ತಾ?
Rohit Sharma Records : ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಇದೇ ಶುಕ್ರವಾರದಿಂದ ವಿಶಾಖಪಟ್ಟಣಂನಲ್ಲಿ ಆರಂಭವಾಗಲಿದೆ. ನಾಯಕ ರೋಹಿತ್ ಶರ್ಮಾಗೆ ಈ ಮೈದಾನ ಬಹಳ ವಿಶೇಷವಾದುದ್ದಾಗಿದೆ. ಏಕೆಂದರೆ ಇದೇ ಮೈದಾನದಲ್ಲಿ ನಾಯಕ ರೋಹಿತ್ ಎರಡೆರಡು ಶತಕ ಸಿಡಿಸಿ ಮಿಂಚಿದ್ದರು.
Updated on: Feb 01, 2024 | 3:32 PM

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಇದೇ ಶುಕ್ರವಾರದಿಂದ ವಿಶಾಖಪಟ್ಟಣಂನಲ್ಲಿ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಪಂದ್ಯ ಸೋಲಿನೊಂದಿಗೆ ರೋಹಿತ್ ಅವರ ಫಾರ್ಮ್ ಕೂಡ ಕಳವಳಕಾರಿಯಾಗಿದೆ.

ಇದೀಗ ಇಂಗ್ಲೆಂಡ್ ವಿರುದ್ಧ ತಂಡವನ್ನು ಮತ್ತೆ ಗೆಲುವಿನ ಲಯಕ್ಕೆ ಮರಳಿ ತರುವ ಜವಬ್ದಾರಿ ನಾಯಕ ರೋಹಿತ್ ಮೇಲಿದೆ. ಅದು ಸಾಧ್ಯವಾಗಬೇಕಾದರೆ ರೋಹಿತ್ ಈ ಪಂದ್ಯದಲ್ಲಿ ಒಂದು ಬಿಗ್ ಇನ್ನಿಂಗ್ಸ್ ಆಡಬೇಕಿದೆ. ಇದಕ್ಕೆ ಪೂರಕವಾಗಿ ಎರಡನೇ ಟೆಸ್ಟ್ ಪಂದ್ಯ ಕೂಡ ರೋಹಿತ್ ಅವರ ಫೆವರೇಟ್ ಮೈದಾನದಲ್ಲೇ ನಡೆಯುತ್ತಿದೆ.

ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ವಿಶಾಖಪಟ್ಟಣಂನಲ್ಲಿ ರೋಹಿತ್ ಶರ್ಮಾ ಕೊನೆಯ ಬಾರಿಗೆ 2018 ರ ಅಕ್ಟೋಬರ್ 2 ರಂದು ಕಣಕ್ಕಿಳಿದಿದ್ದರು. ಆಗ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕರಾಗಿದ್ದರಿಂದ, ಏಕದಿನ ಪಂದ್ಯದಂತೆ ರೋಹಿತ್ ಶರ್ಮಾಗೆ ಓಪನಿಂಗ್ ಜವಾಬ್ದಾರಿಯನ್ನು ವಹಿಸಿದ್ದರು.

ಇದನ್ನೇ ಕಾಯುತ್ತಿದ್ದ ರೋಹಿತ್, ಮಯಾಂಕ್ ಅಗರ್ವಾಲ್ ಜೊತೆಗೆ ಟೆಸ್ಟ್ನಲ್ಲಿ ಮೊದಲ ಬಾರಿಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದರು. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಕೂಡ ಆಡಿದರು.

ತಮ್ಮ ಇನ್ನಿಂಗ್ಸ್‌ನಲ್ಲಿ 244 ಎಸೆತಗಳನ್ನು ಎದುರಿಸಿದ್ದ ರೋಹಿತ್ ಶರ್ಮಾ 23 ಬೌಂಡರಿ ಹಾಗೂ 6 ಸಿಕ್ಸರ್ ಕೂಡ ಬಾರಿಸಿದ್ದರು. ರೋಹಿತ್ ಅವರ ಈ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ಭಾರತ 7 ವಿಕೆಟ್ ಕಳೆದುಕೊಂಡು 502 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲೂ ಮತ್ತೆ ಅಬ್ಬರಿಸಿದ್ದ ರೋಹಿತ್ ಶರ್ಮಾ ಇಲ್ಲೂ ಸಹ 127 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಅಡಿದ್ದರು. ಅಂದರೆ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲೂ ರೋಹಿತ್ ಶತಕ ಸಿಡಿಸಿದ್ದರು. ಈ ವೇಳೆ ರೋಹಿತ್ 149 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 7 ಸಿಕ್ಸರ್ ಸಹಾಯದಿಂದ 127 ರನ್ ಕಲೆಹಾಕಿದ್ದರು .

ಹೀಗಾಗಿ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು 323 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ರೋಹಿತ್ ಶರ್ಮಾ ಅವರ ಈ ಎರಡು ಇನ್ನಿಂಗ್ಸ್‌ಗಳಿಂದ ಭಾರತ ಈ ಪಂದ್ಯವನ್ನು 203 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತು.

ಆದರೆ, ರೋಹಿತ್ ಹೊರತಾಗಿ ಮತ್ತೊಬ್ಬ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಕೂಡ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ 215 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು.

ಈ ಮೈದಾನದಲ್ಲಿ ಭಾರತ ತಂಡ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯವನ್ನು ಗೆಲ್ಲುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಇದು ಟೀಂ ಇಂಡಿಯಾದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದರೆ, ಇಂಗ್ಲೆಂಡ್ ತೋರಿದ ಪ್ರದರ್ಶನದ ಪ್ರಕಾರ, ಭಾರತಕ್ಕೆ ಗೆಲುವು ದಾಖಲಿಸುವುದು ಸುಲಭದ ಕೆಲಸವಲ್ಲ. ಮೈದಾನದಲ್ಲಿ ಉಭಯ ತಂಡಗಳು ಹೇಗೆ ಆಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ.




