ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಆದರೆ ನಿರೀಕ್ಷಿತ ಆರಂಭ ಪಡೆಯುವಲ್ಲಿ ಟೀಮ್ ಇಂಡಿಯಾ ವಿಫಲವಾಯಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (10) ಬೇಗನೆ ಔಟಾದರೆ, ಶುಭ್ಮನ್ ಗಿಲ್ (0) ಶೂನ್ಯದೊಂದಿಗೆ ಮರಳಿದ್ದರು. ರಜತ್ ಪಾಟಿದಾರ್ ಕಲೆಹಾಕಿದ್ದು ಕೇವಲ 5 ರನ್ಗಳು ಮಾತ್ರ. ಇದಾಗ್ಯೂ ಒಂದೆಡೆ ರೋಹಿತ್ ಶರ್ಮಾ ಕ್ರೀಸ್ ಕಚ್ಚಿ ನಿಂತಿದ್ದರು.
ರವೀಂದ್ರ ಜೊತೆಗೂಡಿ 4ನೇ ವಿಕೆಟ್ಗೆ 150* ರನ್ಗಳ ಜೊತೆಯಾಟವಾಡಿದ ರೋಹಿತ್ ಶರ್ಮಾ ಭಾರತ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಲ್ಲದೆ 157 ಎಸೆತಗಳಲ್ಲಿ 11 ಫೋರ್ ಹಾಗೂ 2 ಭರ್ಜರಿ ಸಿಕ್ಸರ್ನೊಂದಿಗೆ ಆಕರ್ಷಕ ಶತಕ ಪೂರೈಸಿದರು.
ಇದು ರೋಹಿತ್ ಶರ್ಮಾ ಅವರ 11ನೇ ಟೆಸ್ಟ್ ಶತಕ ಎಂಬುದು ವಿಶೇಷ. ಅಂದರೆ ಇದುವರೆಗೆ 97 ಟೆಸ್ಟ್ ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ 1 ದ್ವಿಶತಕ, ಹತ್ತು ಶತಕ ಹಾಗೂ 17 ಅರ್ಧಶತಕಗಳೊಂದಿಗೆ 3925 ರನ್ಗಳನ್ನು ಕಲೆಹಾಕಿದ್ದಾರೆ.
ರೋಹಿತ್ ಶರ್ಮಾ (102) ಅವರ ಈ ಭರ್ಜರಿ ಶತಕ ಹಾಗೂ ರವೀಂದ್ರ ಜಡೇಜಾ (68) ಅವರ ಅರ್ಧಶತಕದ ನೆರವಿನಿಂದ ಇದೀಗ ಟೀಮ್ ಇಂಡಿಯಾ ಉತ್ತಮ ಸ್ಥಿತಿಯಲ್ಲಿದ್ದು, 53 ಓವರ್ಗಳ ಮುಕ್ತಾಯದ ವೇಳೆಗೆ ಭಾರತ ತಂಡವು 3 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ ದಾಪುಗಾಲಿಟ್ಟಿದೆ.
ಇನ್ನು ಈ ಶತಕದೊಂದಿಗೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಸೌರವ್ ಗಂಗೂಲಿ ನಾಲ್ಕನೇ ಸ್ಥಾನದಲ್ಲಿದ್ದರು. ಟೀಮ್ ಇಂಡಿಯಾ ಪರ 485 ಇನಿಂಗ್ಸ್ ಆಡಿರುವ ಸೌರವ್ ಗಂಗೂಲಿ ಒಟ್ಟು 18433 ರನ್ ಪೇರಿಸಿ ಈ ಸಾಧನೆ ಮಾಡಿದ್ದರು.
ಇದೀಗ 494ನೇ ಇನಿಂಗ್ಸ್ ಮೂಲಕ ರೋಹಿತ್ ಶರ್ಮಾ 18587+ ರನ್ ಕಲೆಹಾಕಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತದ 4ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
Published On - 2:34 pm, Thu, 15 February 24