Rohit Sharma: ಸೌರವ್ ಗಂಗೂಲಿ ದಾಖಲೆ ಮುರಿದ ರೋಹಿತ್ ಶರ್ಮಾ
India vs England: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾ ನಾಯಕ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ವಿವರ ಈ ಕೆಳಗಿನಂತಿದೆ...
Updated on: Feb 15, 2024 | 1:53 PM

ರಾಜ್ಕೋಟ್ನ ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು.

ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (10) ಬೇಗನೆ ಔಟಾದರೆ, ಇದರ ಬೆನ್ನಲ್ಲೇ ಶುಭ್ಮನ್ ಗಿಲ್ (0) ವಿಕೆಟ್ ಒಪ್ಪಿಸಿದರು. ಇನ್ನು ರಜತ್ ಪಾಟಿದಾರ್ (5) ಬಂದ ವೇಗದಲ್ಲೇ ಹಿಂತಿರುಗಿದರು.

ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಕ್ರೀಸ್ ಕಚ್ಚಿ ನಿಂತ ರೋಹಿತ್ ಶರ್ಮಾ ನಾಯಕನ ಆಟವಾಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡುವ ಜವಾಬ್ದಾರಿವಹಿಸಿಕೊಂಡ ರೋಹಿತ್ ಶರ್ಮಾ ರವೀಂದ್ರ ಜಡೇಜಾ ಜೊತೆಗೂಡಿ ಇನಿಂಗ್ಸ್ ಕಟ್ಟಿದರು.

ಅಷ್ಟೇ ಅಲ್ಲದೆ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತೀ ಹೆಚ್ಚು ರನ್ ಕಲೆಹಾಕಿದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾದರು. ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಗಂಗೂಲಿ 4ನೇ ಸ್ಥಾನದಲ್ಲಿದ್ದರು.

ಟೀಮ್ ಇಂಡಿಯಾ ಪರ 485 ಇನಿಂಗ್ಸ್ ಆಡಿರುವ ಸೌರವ್ ಗಂಗೂಲಿ ಒಟ್ಟು 18433 ರನ್ ಕಲೆಹಾಕಿದ್ದಾರೆ. ಈ ವೇಳೆ 38 ಶತಕ ಹಾಗೂ 106 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಇದೀಗ 494ನೇ ಇನಿಂಗ್ಸ್ ಮೂಲಕ ರೋಹಿತ್ ಶರ್ಮಾ 18587+ ರನ್ ಕಲೆಹಾಕಿದ್ದು, ಈ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಭಾರತದ ಪರ 782 ಇನಿಂಗ್ಸ್ ಆಡಿರುವ ಸಚಿನ್ 100 ಶತಕ ಮತ್ತು 164 ಅರ್ಧಶತಕಗಳೊಂದಿಗೆ ಒಟ್ಟು 34357 ರನ್ ಪೇರಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಟೀಮ್ ಇಂಡಿಯಾ 44 ಓವರ್ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿದೆ. ಸದ್ಯ ರೋಹಿತ್ ಶರ್ಮಾ (80) ಹಾಗೂ ರವೀಂದ್ರ ಜಡೇಜಾ (50) ಕ್ರೀಸ್ನಲ್ಲಿದ್ದಾರೆ.
