ವೆಸ್ಟ್ ಇಂಡೀಸ್ ಬಳಿಕ ಇದೀಗ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನೂ ಭಾರತ ಕ್ರಿಕೆಟ್ ತಂಡ ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಗೈದಿದೆ. ಹರಾರೆಯಲ್ಲಿ ಸೋಮವಾರ ನಡೆದ ಅಂತಿಮ ತೃತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 13 ರನ್ ಗಳ ರೋಚಕ ಗೆಲುವು ಕಂಡಿತು.
ಶುಭ್ಮನ್ ಗಿಲ್ ಅವರ ಆಕರ್ಷಕ ಶತಕ, ಇಶಾನ್ ಕಿಶನ್ ಅರ್ಧಶತಕ ಒಂದು ಕಡೆಯಾದರೆ ಬೌಲರ್ ಗಳು ಮತ್ತೊಮ್ಮೆ ಸಂಘಟಿತ ಪ್ರದರ್ಶನ ತೋರಿದರು. ಈ ಮೂಲಕ 3-0 ಅಂತರದಿಂದ ಕೆಎಲ್ ರಾಹುಲ್ ಪಡೆ ಏಕದಿನ ಸರಣಿಯನ್ನು ಟೈಟ್ ವಾಷ್ ಮಾಡಿದೆ.
ಮೊದಲ ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 289 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ ಶುಭ್ಮನ್ ಗಿಲ್ 97 ಎಸೆತಗಳಲ್ಲಿ ಜೀವನಶ್ರೇಷ್ಠ 130 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.
ಸವಾಲಿನ ಬೆನ್ನಟ್ಟಿದ ಜಿಂಬಾಬ್ವೆ ತಂಡ 49.3 ಓವರ್‌ಗಳಲ್ಲಿ 276 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಿಖಂದರ್ 95 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮೂರು ಸಿಕ್ಸರ್ ನೆರವಿನಿಂದ 115 ರನ್ ಗಳಿಸಿ ಅಬ್ಬರಿಸಿದರು.
ಸೀನ್ ವಿಲಿಮ್ಸ್ 45 ಹಾಗೂ ಬ್ರಾಡ್ ಇವಾನ್ಸ್ 28 ರನ್ ಗಳಿಸಿ ಗಮನ ಸೆಳೆದರು. ಭಾರತದ ಪರ ಆವೇಶ್ ಖಾನ್ ಮೂರು ಮತ್ತು ದೀಪಕ್ ಚಾಹರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಕಬಳಿಸಿದರು.
ಸೋತ ಜಿಂಬಾಬ್ವೆ ತಂಡದ ನಾಯಕ ರೆಗಿಸಾ ಜಕಾಬ್ವಾ ಮಾತನಾಡಿ, ”ಮೊದಲಿಗೆ ಭಾರತ ತಂಡಕ್ಕೆ ಶುಭಕೋರುತ್ತೇನೆ. ಅವರು ಅತ್ಯುತ್ತಮ ಆಟವಾಡಿದ್ದಾರೆ. ಸಿಖಂದರ್ ಮತ್ತು ಬ್ರಾಡ್ ಉತ್ತಮ ಫೈಟ್ ನೀಡಿದರು. ಆದರೆ, ಭಾರತ ತನ್ನ ಘನತೆಯನ್ನು ಉಳಿಸಿಕೊಂಡಿತು. ನಾವು ಕಷ್ಟದ ಸಂದರ್ಭದಿಂದ ಕಮ್ಬ್ಯಾಕ್ ಮಾಡಿದ್ದೇವೆ. ನಮ್ಮ ಬೌಲಿಂಗ್ ವಿಭಾಗದಲ್ಲಿ ಪಾಸಿಟಿವ್ ಇದೆ. ಈ ಸರಣಿಯಿಂದ ಅನೇಕ ವಿಚಾರಗಳನ್ನು ಕಲಿತಿದ್ದೇವೆ,” ಎಂದು ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್, ತುಂಬಾ ಸಂತಸವಾಗುತ್ತಿದೆ. ನಾವು ಕೆಲ ಉತ್ತಮ ಯೋಜನೆಯೊಂದಿಗೆ ಇಲ್ಲಿಗೆ ಬಂದಿದ್ದೆವು. ಅವರು ತುಂಬಾ ವೃತ್ತಿಪರರಾಗಿದ್ದಾರೆ, ಈ ಫಲಿತಾಂಶದಿಂದ ಸಂತೋಷವಾಗಿದೆ. ನಾವು ಈ ಪಂದ್ಯವನ್ನು ಆದಷ್ಟು ಬೇಗ ಮುಗಿಸಲು ಭಯಸಿದ್ದೆವು. ಆದರೆ, ಜಿಂಬಾಬ್ವೆ ಅಂತಿಮ ಹಂತದವರೆಗೆ ಪಂದ್ಯವನ್ನು ಕೊಂಡೊಯ್ಯಿದರು.
Published On - 10:06 am, Tue, 23 August 22