IND vs WI: ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ಯಾವಾಗ ಶುರು? ಇಲ್ಲಿದೆ ಮಾಹಿತಿ
India vs West Indies 2nd Test: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಿದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 140 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
Updated on: Oct 05, 2025 | 11:25 AM

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಣ ಟೆಸ್ಟ್ ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್ ಪಡೆಯನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ ಕಲೆಹಾಕಿದ್ದು ಕೇವಲ 162 ರನ್ಗಳು ಮಾತ್ರ. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ನಲ್ಲಿ 448 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.

286 ರನ್ಗಳ ಪ್ರಥಮ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಕೇವಲ 146 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 140 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು 2 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಇನ್ನು ಈ ಸರಣಿಯ ದ್ದಿತೀಯ ಪಂದ್ಯವು ಅಕ್ಟೋಬರ್ 10 ರಿಂದ ಶುರುವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆಯಲ್ಲಿದೆ.

ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ರೋಸ್ಟನ್ ಚೇಸ್ (ನಾಯಕ), ಜೋಮೆಲ್ ವಾರಿಕನ್, ಕೆವ್ಲಾನ್ ಆಂಡರ್ಸನ್, ಅಲಿಕ್ ಅಥನಾಝ್, ಜಾನ್ ಕ್ಯಾಂಪ್ಬೆಲ್, ತೇಜ್ನರೈನ್ ಚಂದ್ರಪಾಲ್, ಜಸ್ಟಿನ್ ಗ್ರೀವ್ಸ್, ಶೈ ಹೋಪ್, ಟೆವಿನ್ ಇಮ್ಲಾಚ್, ಅಲ್ಝಾರಿ ಜೋಸೆಫ್, ಬ್ರಾಂಡನ್ ಕಿಂಗ್, ಆಂಡರ್ಸನ್ ಫಿಲಿಪ್, ಖಾರಿ ಪಿಯರೆ, ಜೇಡನ್ ಸೀಲ್ಸ್, ಜೋಹಾನ್ ಲೇನ್.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ, ಎನ್ ಜಗದೀಸನ್ (ವಿಕೆಟ್ ಕೀಪರ್).




