Updated on: Apr 08, 2023 | 10:57 PM
IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಸಿಎಸ್ಕೆ ತಂಡದ ಅಜಿಂಕ್ಯ ರಹಾನೆ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿತ್ತು.
158 ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ತಂಡವು ಮೊದಲ ಓವರ್ನಲ್ಲೇ ಡೆವೊನ್ ಕಾನ್ವೆ (0) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅದರಲ್ಲೂ ಅರ್ಷದ್ ಖಾನ್ ಅವರ ಒಂದೇ ಓವರ್ನಲ್ಲಿ 1 ಸಿಕ್ಸ್ ಹಾಗು 4 ಫೋರ್ನೊಂದಿಗೆ ಒಟ್ಟು 23 ರನ್ ಬಾರಿಸಿ ಅಬ್ಬರಿಸಿದರು.
ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಅಜಿಂಕ್ಯ ರಹಾನೆ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ವಿಶೇಷ ಎಂದರೆ ಇದು ಈ ಬಾರಿಯ ಐಪಿಎಲ್ನ ಅತ್ಯಂತ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಜೋಸ್ ಬಟ್ಲರ್ ಹಾಗೂ ಶಾರ್ದೂಲ್ ಠಾಕೂರ್ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಇದೀಗ 19 ಎಸೆತಗಳ ಮೂಲಕ ಹಾಫ್ ಸೆಂಚುರಿಸಿ ಸಿಡಿಸಿರುವ ರಹಾನೆ ಸಿಎಸ್ಕೆ ಪರ ಅತ್ಯಂತ ವೇಗವಾಗಿ ಅರ್ಧಶತಕ ಬಾರಿಸಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಸಿಎಸ್ಕೆ ಪರ ಅತ್ಯಂತ ವೇಗದ ಅರ್ಧಶತಕದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. ರೈನಾ 2014 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಹಾಗೆಯೇ ಐಪಿಎಲ್ನ ಅತ್ಯಂತ ವೇಗದ ಅರ್ಧಶತಕದ ದಾಖಲೆ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಪ್ಯಾಟ್ ಕಮಿನ್ಸ್ ಹೆಸರಿನಲ್ಲಿದೆ. 2022 ರಲ್ಲಿ ಕೆಕೆಆರ್ ತಂಡದ ಕಮಿನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, 2018 ರಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು.