Updated on: Apr 12, 2023 | 10:07 PM
IPL 2023: ಟಿ20 ಕ್ರಿಕೆಟ್ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು 200 ಕ್ಕೂ ಅಧಿಕ ರನ್ ಕಲೆಹಾಕಿದರೆ ಅರ್ಧ ಪಂದ್ಯ ಗೆದ್ದಂತೆ...ಆದರೆ RCB ವಿಷಯದಲ್ಲಿ ಇದು ಅನ್ವಯಿಸುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಫಲಿತಾಂಶ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಮ್ಯಾಕ್ಸ್ವೆಲ್ ಅವರ ಅಬ್ಬರದೊಂದಿಗೆ RCB 212 ರನ್ ಕಲೆಹಾಕಿತು. ಇತ್ತ ಬೃಹತ್ ಮೊತ್ತ ನೋಡಿ ಅಭಿಮಾನಿಗಳು ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದರು.
ಆದರೆ ಪಂದ್ಯ ಮುಗಿದಾಗ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿ ಸಂಭ್ರಮಿಸುತ್ತಿದ್ದರು. ಇತ್ತ ಎಂದಿನಂತೆ ಆರ್ಸಿಬಿ ಅಭಿಮಾನಿಗಳು ನಿರಾಸೆಯೊಂದಿಗೆ ಮರಳಿದ್ದರು. ಇಂತಹ ನಿರಾಸೆಯ ಫಲಿತಾಂಶ RCB ಪಾಲಿಗೆ ಇದು ಮೊದಲೇನಲ್ಲ.
ಏಕೆಂದರೆ ಐಪಿಎಲ್ ಇತಿಹಾಸದಲ್ಲೇ 200 ಅಧಿಕ ರನ್ ಬಾರಿಸಿ ಅತೀ ಹೆಚ್ಚು ಬಾರಿ ಸೋತಿರುವ ದಾಖಲೆ ಹೊಂದಿರುವುದೇ RCB ತಂಡ. ಹೀಗಾಗಿ RCB ಇನ್ನೂರಕ್ಕೂ ಅಧಿಕ ರನ್ ಕಲೆಹಾಕಿದ ಮಾತ್ರಕ್ಕೆ ಗೆದ್ದೇ ಗೆಲ್ಲುತ್ತೆ ಎಂದೇಳಲಾಗುವುದಿಲ್ಲ. ಇದಕ್ಕೆ ನಿದರ್ಶನವೇ ಈ ಅಂಕಿ ಅಂಶಗಳು...
RCB ತಂಡವು ಐಪಿಎಲ್ನಲ್ಲಿ 5 ಬಾರಿ 200ಕ್ಕೂ ಅಧಿಕ ರನ್ ಕಲೆಹಾಕಿ ಸೋಲನುಭವಿಸಿದೆ. ಅಂದರೆ ಆರ್ಸಿಬಿ ಬೌಲರ್ಗಳನ್ನು ಬೆಂಡೆತ್ತಿ ಎದುರಾಳಿ ತಂಡಗಳು ಬೃಹತ್ ಮೊತ್ತವನ್ನು ಚೇಸ್ ಮಾಡಿ ಗೆದ್ದಿದೆ. ಇದು ಐಪಿಎಲ್ ಇತಿಹಾಸದ ದಾಖಲೆ ಎಂಬುದೇ ವಿಶೇಷ. ಅಂದರೆ ಐಪಿಎಲ್ನಲ್ಲಿ 200 ಕ್ಕೂ ಅಧಿಕ ರನ್ ಕಲೆಹಾಕಿ ಅತೀ ಹೆಚ್ಚು ಬಾರಿ ಚೇಸಿಂಗ್ನಲ್ಲಿ ಸೋತ ತಂಡ RCB.
200+ ರನ್ಗಳಿಸಿ ಅತೀ ಹೆಚ್ಚು ಬಾರಿಸಿ ಪರಾಜಯಗೊಂಡ ತಂಡಗಳ ಪಟ್ಟಿಯಲ್ಲಿ RCB (5 ಬಾರಿ) ಅಗ್ರಸ್ಥಾನದಲ್ಲಿದ್ದರೆ, ಸಿಎಸ್ಕೆ ತಂಡವು (3 ಬಾರಿ) ದ್ವಿತೀಯ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಲಾ 2 ಬಾರಿ 200 ಕ್ಕೂ ಅಧಿಕ ರನ್ ಕಲೆಹಾಕಿದರೂ ಪಂದ್ಯ ಸೋತಿದೆ.
ಐಪಿಎಲ್ ಇತಿಹಾಸದ ಅಂಕಿ ಅಂಶಗಳ ಪ್ರಕಾರವೇ ನೋಡುವುದಾದರೆ, RCB ತಂಡವು 200 ಕ್ಕೂ ಅಧಿಕ ರನ್ ಬಾರಿಸಿದರೂ ಗೆಲುವು ನಮ್ಮದೇ ಎನ್ನುವಂತಿಲ್ಲ. ಪಂದ್ಯದ ಕೊನೆಯ ಬಾಲ್ ತನಕ ಕಾಯಲೇಬೇಕು. ಇಲ್ಲದಿದ್ದರೆ ಫಲಿತಾಂಶ ಏನು ಬೇಕಾದ್ರೂ ಆಗಬಹುದು...ಇದಕ್ಕೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯವೇ ತಾಜಾ ಉದಾಹರಣೆ.