IPL 2023: ಮೂರು ಸಂಭ್ರಮಕ್ಕೆ ಇದೇ ಕಾರಣ: ಬಡ್ಡಿ ಸಮೇತ ತಿರುಗಿಸಿ ಕೊಟ್ಟ ವಿರಾಟ್ ಕೊಹ್ಲಿ
IPL 2023 Kannada: ಈ ಸುಲಭ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ರನ್ಗಳಿಸಲು ಪರದಾಡಿದರು. ಅದರಲ್ಲೂ ಪ್ರತಿ ವಿಕೆಟ್ ಬೀಳುತ್ತಿದ್ದಂತೆ RCB ಆಟಗಾರ ವಿರಾಟ್ ಕೊಹ್ಲಿಯ (Virat Kohli) ಸಂಭ್ರಮ ಮುಗಿಲು ಮುಟ್ಟಿತ್ತು.
Updated on:May 02, 2023 | 3:56 PM

IPL 2023: ಸೋಮವಾರ ಲಕ್ನೋನ ಏಕನಾ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡವು 18 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಕೇವಲ 126 ರನ್ ಮಾತ್ರ ಕಲೆಹಾಕಿದ್ದರು.

ಈ ಸುಲಭ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ರನ್ಗಳಿಸಲು ಪರದಾಡಿದರು. ಅದರಲ್ಲೂ ಪ್ರತಿ ವಿಕೆಟ್ ಬೀಳುತ್ತಿದ್ದಂತೆ ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿಯ ಸಂಭ್ರಮ ಮುಗಿಲು ಮುಟ್ಟಿತ್ತು.

ಪ್ರತಿ ಸಂಭ್ರಮದಲ್ಲೂ ಕಿಂಗ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಟಾರ್ಗೆಟ್ ಮಾಡಿದ್ದರು. ಅದರಲ್ಲೂ ಕೆಲವೊಮ್ಮೆ ಲಕ್ನೋ ತಂಡದ ಡಗೌಟ್ನತ್ತ ಮುಖ ಮಾಡಿ ಆಕ್ರೋಶಭರಿತರಾಗಿ ಸಂಭ್ರಮಿಸಿದ್ದರು. ಕೊಹ್ಲಿಯ ಇಂತಹ ಸಂಭ್ರಮಕ್ಕೆ ಮುಖ್ಯ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಲಕ್ನೋ ಆಟಗಾರರ ಸಂಭ್ರಮ.

ಹೌದು, ಏಪ್ರಿಲ್ 10 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ನಿಕೋಲಸ್ ಪೂರನ್ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಸಂಭ್ರಮಿಸಿದ್ದರು.

ಇನ್ನು ಪಂದ್ಯ ಗೆಲ್ಲುತ್ತಿದ್ದಂತೆ ರವಿ ಬಿಷ್ಣೋಯ್ ಕೂಡ ಕ್ಯಾಮೆರಾ ನೋಡಿ ಕುಣಿದು ಕುಪ್ಪಳಿಸಿದರು. ಅಲ್ಲದೆ ಗೌತಮ್ ಗಂಭೀರ್ ಆರ್ಸಿಬಿ ಅಭಿಮಾನಿಗಳನ್ನು ಟಾರ್ಗೆಟ್ ಮಾಡಿದ್ದರು.

ಗೆಲುವಿನ ಸಂಭ್ರಮದ ನಡುವೆ ಗಂಭೀರ್ ಆರ್ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದ್ದರು. ಇದೆಲ್ಲವನ್ನೂ ವೀಕ್ಷಿಸುತ್ತಾ ಅಂದು ವಿರಾಟ್ ಕೊಹ್ಲಿ ಮೈದಾನದಿಂದ ಹೊರ ನಡೆದಿದ್ದರು.

ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತವರು ಮೈದಾನದಲ್ಲೇ ಬಗ್ಗು ಬಡಿಯುವ ಮೂಲಕ ಕಿಂಗ್ ಕೊಹ್ಲಿ ತಿರುಗೇಟು ನೀಡಿದ್ದಾರೆ. ಅದು ಕೂಡ ಗೌತಮ್ ಗಂಭೀರ್ ಅವರ ಸೈಲೆನ್ಸ್ ಸಂಭ್ರಮ...ನಿಕೋಲಸ್ ಪೂರನ್ರ ಫ್ಲೈ ಕಿಸ್ ಸೆಲೆಬ್ರೇಷನ್ ಹಾಗೂ ರವಿ ಬಿಷ್ಣೋಯ್ ಅವರ ಆಕ್ರೋಶಭರಿತ ಸಂಭ್ರಮದ ಮೂಲಕ ಎಂಬುದು ವಿಶೇಷ.

ಇದೀಗ ವಿರಾಟ್ ಕೊಹ್ಲಿಯ ಈ ಭರ್ಜರಿ ಸಂಭ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಿಂಗ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ಗೆ ಬಡ್ಡಿ ಸಮೇತ ಈಗ ತಿರುಗಿಸಿಕೊಟ್ಟಿದ್ದಾರೆ ಎಂದು ಆರ್ಸಿಬಿ ಅಭಿಮಾನಿಗಳು ಈ ಸಂಭ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Published On - 3:56 pm, Tue, 2 May 23



















