ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದೆ. ಇಂದು (ಮೇ 19) ಮಧ್ಯಾಹ್ನ ಹೈದರಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಭುಜದ ಗಾಯದ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಇನ್ನು ಹಂಗಾಮಿ ನಾಯಕರಾಗಿದ್ದ ಸ್ಯಾಮ್ ಕರನ್ ಅಂತಾರಾಷ್ಟ್ರೀಯ ಪಂದ್ಯವಾಡಲು ಇಂಗ್ಲೆಂಡ್ಗೆ ಮರಳಿದ್ದಾರೆ. ಹೀಗಾಗಿ ಬದಲಿ ನಾಯಕನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಪಂಜಾಬ್ ಕಿಂಗ್ಸ್ ಮುಂದಿತ್ತು.
ಅದರಂತೆ ಇದೀಗ 30 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ 16ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೂ ಜಿತೇಶ್ ಶರ್ಮಾ ಪಾತ್ರರಾಗಲಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ 13 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ತಂಡವು 5 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಇನ್ನು 8 ಪಂದ್ಯಗಳಲ್ಲಿ ಸೋಲನುಭವಿಸಿರುವ ಕಿಂಗ್ಸ್ ಪಡೆ ತನ್ನ ಕೊನೆಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ನಲ್ಲಿ ಪಂಜಾಬ್ ಕಿಂಗ್ಸ್ ಸೋತರೆ 9ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿಯಲಿದೆ.
ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ 9ನೇ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸುವ ಇರಾದೆಯಲ್ಲಿದೆ ಪಂಜಾಬ್ ಕಿಂಗ್ಸ್ ತಂಡ. ಅದರಂತೆ ಚೊಚ್ಚಲ ಬಾರಿ ನಾಯಕನಾಗಿ ಕಣಕ್ಕಿಳಿಯುತ್ತಿರುವ ಜಿತೇಶ್ ಶರ್ಮಾ ಗೆಲುವಿನ ನಗೆ ಬೀರಲಿದ್ದಾರಾ ಕಾದು ನೋಡಬೇಕಿದೆ.
Published On - 11:31 am, Sun, 19 May 24