IPL 2024: ಐಪಿಎಲ್ ಸೀಸನ್ 17 ರ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ಲೇಆಫ್ಗೆ ಪ್ರವೇಶಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಯಶ್ ದಯಾಳ್ (Yash Dayal) ಕೂಡ ಒಬ್ಬರು.
ಏಕೆಂದರೆ ಈ ಪಂದ್ಯದ ಕೊನೆಯ ಓವರ್ನಲ್ಲಿ ಪ್ಲೇಆಫ್ ಪ್ರವೇಶಿಸಲು ಸಿಎಸ್ಕೆ ತಂಡಕ್ಕೆ 17 ರನ್ಗಳ ಅವಶ್ಯಕತೆಯಿತ್ತು. ಕ್ರೀಸ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಇದ್ದರು. ಮೊದಲ ಎಸೆತದಲ್ಲಿ ಧೋನಿ ಭರ್ಜರಿ ಸಿಕ್ಸ್ ಸಿಡಿಸಿದರು. ಸಿಎಸ್ಕೆ ತಂಡದ ಗುರಿಯು 5 ಎಸೆತಗಳಲ್ಲಿ 11 ರನ್ಗಳಿಗೆ ಇಳಿಯಿತು.
ಆದರೆ 2ನೇ ಎಸೆತದಲ್ಲಿ ಧೋನಿಯನ್ನು ಔಟ್ ಮಾಡುವಲ್ಲಿ ಯಶ್ ದಯಾಳ್ ಯಶಸ್ವಿಯಾದರು. ಇನ್ನು 3ನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. 4ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಒಂದು ರನ್ ಓಡಿದರು. ಕೊನೆಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾರನ್ನು ಕಟ್ಟಿ ಹಾಕುವಲ್ಲಿ ಯಶ್ ದಯಾಳ್ ಯಶಸ್ವಿಯಾದರು. ಈ ಮೂಲಕ ಆರ್ಸಿಬಿ ತಂಡವನ್ನು ಪ್ಲೇಆಫ್ ಹಂತಕ್ಕೇರಿಸುವಲ್ಲಿ ದಯಾಳ್ ಯಶಸ್ವಿಯಾದರು.
ಅಂತಿಮ ಓವರ್ನಲ್ಲಿ ಕೇವಲ 7 ರನ್ ಮಾತ್ರ ನೀಡಿ ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟ ಯಶ್ ದಯಾಳ್ ಅವರ ಪ್ರದರ್ಶನಕ್ಕೆ ಕೆಕೆಆರ್ ಆಟಗಾರ ರಿಂಕು ಸಿಂಗ್ ಭೇಷ್ ಅಂದಿದ್ದಾರೆ. ರಿಂಕು ಸಿಂಗ್ ಹೀಗೆ ಭಲೇ ಭೇಷ್ ಎನ್ನಲು ಮುಖ್ಯ ಕಾರಣ ಇದೇ ಯಶ್ ದಯಾಳ್ ಅವರ ಒಂದೇ ಓವರ್ನಲ್ಲಿ ರಿಂಕು 5 ಸಿಕ್ಸ್ ಸಿಡಿಸಿರುವುದು.
ಐಪಿಎಲ್ 2023 ರಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಕೊನೆಯ ಓವರ್ನಲ್ಲಿ 29 ರನ್ಗಳ ಅವಶ್ಯಕತೆಯಿತ್ತು. ಯಶ್ ದಯಾಳ್ ಎಸೆದ ಅಂತಿಮ ಓವರ್ನಲ್ಲಿ ರಿಂಕು ಸಿಂಗ್ 5 ಭರ್ಜರಿ ಸಿಕ್ಸ್ ಸಿಡಿಸಿ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಇದೀಗ ಅದೇ ಯಶ್ ದಯಾಳ್ ಕೊನೆಯ ಓವರ್ನಲ್ಲಿ ಆರ್ಸಿಬಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
ಈ ಗೆಲುವಿನ ಬೆನ್ನಲ್ಲೇ ಇನ್ಸ್ಟಾಗ್ರಾಮ್ನಲ್ಲಿ ಯಶ್ ದಯಾಳ್ ಅವರ ಫೋಟೋವನ್ನು ಹಂಚಿಕೊಂಡಿರುವ ರಿಂಕು ಸಿಂಗ್, ಎಲ್ಲವೂ ದೇವರ ಪ್ಲ್ಯಾನ್...ಎಂದು ಆರ್ಸಿಬಿ ವೇಗಿಯ ಪ್ರದರ್ಶನಕ್ಕೆ ಭೇಷ್ ಅಂದಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 218 ರನ್ಗಳ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಆರ್ಸಿಬಿ ತಂಡ 27 ರನ್ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ.
Published On - 10:01 am, Sun, 19 May 24