IPL 2024: ಈ ಸಲ ಕಪ್ ಗೆಲ್ಲುವ ತಂಡವನ್ನು ಹೆಸರಿಸಿದ ABD
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಶುಕ್ರವಾರದಿಂದ ಶುರುವಾಗಲಿದೆ. ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯದೊಂದಿಗೆ ಶುರುವಾಗಲಿರುವ ಐಪಿಎಲ್ನಲ್ಲಿ ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ಯಾವುದೆಂದು ತಿಳಿಸಿದ್ದಾರೆ ಎಬಿ ಡಿವಿಲಿಯರ್ಸ್.
Updated on: Mar 21, 2024 | 11:53 AM

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ರಂಗೇರಲು ಇನ್ನು ಉಳಿದಿರುವುದು ಕೇವಲ 1 ದಿನ ಮಾತ್ರ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ (ಮಾ.22) ನಡೆಯಲಿರುವ RCB ಮತ್ತು CSK ನಡುವಣ ಪಂದ್ಯದೊಂದಿಗೆ ಐಪಿಎಲ್ಗೆ ಅಧಿಕೃತ ಚಾಲನೆ ದೊರೆಯಲಿದೆ.

ಇತ್ತ ಉದ್ಘಾಟನಾ ಪಂದ್ಯಕ್ಕೂ ಮುನ್ನವೇ ಈ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳಲಿರುವ ತಂಡ ಯಾವುದೆಂದು ತಿಳಿಸಿದ್ದಾರೆ ಸೌತ್ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್. ಎಬಿಡಿ ಪ್ರಕಾರ, ಈ ಬಾರಿ ಕೂಡ ಐಪಿಎಲ್ನಲ್ಲಿ ಭರ್ಜರಿ ಪೈಪೋಟಿ ಕಂಡು ಬರಲಿದೆ.

ಈ ಬಾರಿ ಬಹುತೇಕ ತಂಡಗಳು ಸಮತೋಲನದಿಂದ ಕೂಡಿದೆ. ಇದಾಗ್ಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಬಾರಿಯ ಪ್ಲೇಯಿಂಗ್ ಇಲೆವೆನ್ನ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಆರ್ಸಿಬಿ ಕಡೆಯಿಂದ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಅದರಲ್ಲೂ ಈ ಬಾರಿ ಸ್ಮೃತಿ ಮಂಧಾನಾ ನೇತೃತ್ವದ RCB ಮಹಿಳಾ ತಂಡವು ಸಂಕೋಲೆಗಳನ್ನು ಮುರಿದು ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಗೆಲುವು ಪರುಷರ ತಂಡದ ಮೇಲೂ ಪ್ರಭಾವ ಬೀರಲಿದೆ. ಹೀಗಾಗಿ ಈ ಸಲ ಕಪ್ ನಮ್ದೇ...ಅದರಂತೆ ಈ ಬಾರಿ ಆರ್ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ.

ಎಬಿ ಡಿವಿಲಿಯರ್ಸ್ ಅವರ ಭವಿಷ್ಯದಂತೆ ಐಪಿಎಲ್ನ 17ನೇ ಸೀಸನ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆಯಾ? ವಿರಾಟ್ ಕೊಹ್ಲಿ ಅವರ ಬಹುಕಾಲದ ಕನಸು ನನಸಾಗಲಿದೆಯಾ ಕಾದು ನೋಡಬೇಕಿದೆ.




