Virat Kohli: RCB ಸೋಲಿಗೆ ವಿರಾಟ್ ಕೊಹ್ಲಿ ಕಾರಣ..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಇದುವರೆಗೆ ಮೂರು ಪಂದ್ಯಗಳನ್ನಾಡಿರುವ ಆರ್ಸಿಬಿ ತಂಡವು 2 ಮ್ಯಾಚ್ಗಳಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋತಿದ್ದ ಆರ್ಸಿಬಿ ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ದ ಜಯ ಸಾಧಿಸಿತ್ತು. ಇದೀಗ ಕೆಕೆಆರ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ IPL 2024 ರಲ್ಲಿ ತವರಿನಲ್ಲಿ ಪರಾಜಯಗೊಂಡ ಮೊದಲ ತಂಡ ಎನಿಸಿಕೊಂಡಿದೆ.
Updated on: Mar 30, 2024 | 7:31 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ತನ್ನ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ RCB ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 8 ರನ್ಗಳಿಸಿ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಗ್ರೀನ್ ಜೊತೆಗೂಡಿ ಅಬ್ಬರಿಸಿದ ಕಿಂಗ್ ಕೊಹ್ಲಿ ಪವರ್ಪ್ಲೇನಲ್ಲಿ ತಂಡದ ಮೊತ್ತವನ್ನು 61 ಕ್ಕೆ ತಂದು ನಿಲ್ಲಿಸಿದರು.

ಇನ್ನು ಪವರ್ಪ್ಲೇ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹಾಫ್ ಸೆಂಚುರಿ ಬಳಿಕ ಕೊಹ್ಲಿಯ ಬ್ಯಾಟ್ ಝಳಪಳಿಸಲಿಲ್ಲ ಎಂಬುದೇ ಸತ್ಯ. ಪವರ್ಪ್ಲೇನಲ್ಲಿ 10ರ ಸರಾಸರಿಯಲ್ಲಿ ರನ್ ಕಲೆಹಾಕಿದ ಆರ್ಸಿಬಿ 7 ರಿಂದ 11 ಓವರ್ವರೆಗೆ ಕೇವಲ 5.2ರ ಸರಾಸರಿಯಲ್ಲಿ ರನ್ ಕಲೆಹಾಕಿತು.

ಅಲ್ಲದೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಇನ್ನು ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಬಾರಿಸಿ ಅಜೇಯರಾಗಿ ಉಳಿದರು.

ಅಂದರೆ ಇಲ್ಲಿ ಕೊಹ್ಲಿ 10 ಓವರ್ಗಳನ್ನು (1 ಎಸೆತ ಕಡಿಮೆ) ಎದುರಿಸಿದ್ದರು. ಇದಾಗ್ಯೂ ಅವರು ಕಲೆಹಾಕಿದ್ದು 8.3 ರ ಸರಾಸರಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೊಹ್ಲಿ ಆ ಬಳಿಕ 30 ರನ್ ಕಲೆಹಾಕಲು ಬರೋಬ್ಬರಿ 20 ಎಸೆತಗಳನ್ನು ತೆಗೆದುಕೊಂಡಿದ್ದರು.

ಅಂದರೆ ನಿರ್ಣಾಯಕ ಹಂತದಲ್ಲಿ ವಿರಾಟ್ ಕೊಹ್ಲಿ ಕಡೆಯಿಂದ ಸ್ಪೋಟಕ ಬ್ಯಾಟಿಂಗ್ ಮೂಡಿಬಂದಿರಲಿಲ್ಲ. ಕೊಹ್ಲಿಯ ಈ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಆರ್ಸಿಬಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಿಲ್ಲ ಎಂಬ ವಾದವನ್ನು ಇದೀಗ ಅಭಿಮಾನಿಗಳು ಮುಂದಿಡುತ್ತಿದ್ದಾರೆ.

ಸೆಟ್ ಬ್ಯಾಟ್ಸ್ಮನ್ ಆಗಿ ಕ್ರೀಸ್ನಲ್ಲಿದ್ದ ವಿರಾಟ್ ಕೊಹ್ಲಿ ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರೆ ಆರ್ಸಿಬಿ ತಂಡದ ಮೊತ್ತ 200ರ ಗಡಿದಾಟುತ್ತಿತ್ತು. ಆದರೆ ಕೊಹ್ಲಿ ಕಡೆಯಿಂದ ಅಂತಹ ಇನಿಂಗ್ಸ್ ಬರಲೇ ಇಲ್ಲ. ಇದಕ್ಕೆ ಸಾಕ್ಷಿ ಅವರು ಕೊನೆಯ 20 ಎಸೆತಗಳಲ್ಲಿ 30 ರನ್ಗಳಿಸಿರುವುದು.

ಅದೇ ಕೆಕೆಆರ್ ತಂಡವು ಮೊದಲ 6 ಓವರ್ಗಳಲ್ಲೇ 85 ರನ್ ಸಿಡಿಸಿದ್ದರು. ಅಂದರೆ ಪವರ್ಪ್ಲೇ ಜೊತೆಗೆ ಇನಿಂಗ್ಸ್ ಪೂರ್ತಿ ಕ್ರೀಸ್ನಲ್ಲಿದ್ದ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಬಾರಿಸಿದರೆ, ಕೆಕೆಆರ್ 36 ಎಸೆತಗಳಲ್ಲಿ 85 ರನ್ ಸಿಡಿಸಿದ್ದರು. ಇಲ್ಲಿಯೇ ರನ್ ಸರಾಸರಿಯ ವ್ಯತ್ಯಾಸ ತಿಳಿಯಬಹುದು. ಹೀಗಾಗಿ ಆರ್ಸಿಬಿ ತಂಡದ ಸೋಲಿಗೆ ವಿರಾಟ್ ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಕಾರಣ ಎಂದು ಅಭಿಮಾನಿಗಳು ದೂಷಿಸುತ್ತಿದ್ದಾರೆ.
























