IPL 2024: ಐಪಿಎಲ್ನಲ್ಲಿ ಇಂದು 2 ಪಂದ್ಯ: RCB ಮ್ಯಾಚ್ ಎಷ್ಟು ಗಂಟೆಗೆ ಶುರು?
IPL 2024: ಐಪಿಎಲ್ 2024ರ 36ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್ ತಂಡ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ.
Updated on: Apr 21, 2024 | 8:44 AM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಇಂದು ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿದೆ. ಈ ಪಂದ್ಯಗಳ ಮೂಲಕ ಐಪಿಎಲ್ 2024 ರ ಮೊದಲಾರ್ಧ ಪೂರ್ಣಗೊಳ್ಳಲಿದೆ. ವಿಶೇಷ ಎಂದರೆ ಈ ಪಂದ್ಯದ ಮೂಲಕವೇ ಆರ್ಸಿಬಿ ತನ್ನ ದ್ವಿತೀಯಾರ್ಧವನ್ನು ಆರಂಭಿಸಲಿದೆ.

ಅಂದರೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಕೆಕೆಆರ್ ಹಾಗೂ ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿದೆ. ಸಂಜೆ 3.30 ರಿಂದ ಶುರುವಾಗಲಿರುವ ಈ ಪಂದ್ಯವು ಕೆಕೆಆರ್ ಪಾಲಿಗೆ 7ನೇ ಪಂದ್ಯವಾದರೆ, ಆರ್ಸಿಬಿ ಪಾಲಿಗೆ 8ನೇ ಪಂದ್ಯ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಜಯಗಳಿಸುವ ಇರಾದೆಯಲ್ಲಿದೆ. ಇತ್ತ ಆರ್ಸಿಬಿ ದ್ವಿತೀಯಾರ್ಧದ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ.

ಈ ಬಾರಿಯ ಐಪಿಎಲ್ನಲ್ಲಿ ಈಗಾಗಲೇ ಉಭಯ ತಂಡಗಳು ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕೆಕೆಆರ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಫಾಫ್ ಡುಪ್ಲೆಸಿಸ್ ಪಡೆ. ಹೀಗಾಗಿ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಪೈಪೋಟಿಯನ್ನು ಎದುರು ನೋಡಬಹುದು.

ಇನ್ನು ರಾತ್ರಿ 7.30 ರಿಂದ ಶುರುವಾಗಲಿರುವ ಮತ್ತೊಂದು ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಚಂಡೀಗಢ್ನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಉಭಯ ತಂಡಗಳು ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯದಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಪ್ರಸ್ತುತ ಅಂಕಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 3ನೇ ಸ್ಥಾನದಲ್ಲಿದ್ದರೆ, ಆರ್ಸಿಬಿ ತಂಡ 10ನೇ ಸ್ಥಾನದಲ್ಲಿದೆ. ಹಾಗೆಯೇ ಗುಜರಾತ್ ಟೈಟಾನ್ಸ್ ತಂಡ 8ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ತಂಡ 9ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯಗಳ ಫಲಿತಾಂಶಗಳ ಬಳಿಕ ಅಂಕಪಟ್ಟಿಯಲ್ಲೂ ಮಹತ್ವದ ಬದಲಾವಣೆ ಕಂಡು ಬರಲಿದೆ.



















