Virat Kohli: ಮತ್ತೊಂದು ದಾಖಲೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
IPL 2024 GT vs RCB: ಐಪಿಎಲ್ 2024 ರ 45ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ 76 ರನ್ ಬಾರಿಸಿದರೆ ವಿರಾಟ್ ಕೊಹ್ಲಿ ಹೆಸರಿಗೆ ಎರಡು ವಿಶೇಷ ದಾಖಲೆಗಳು ಸೇರ್ಪಡೆಯಾಗಲಿದೆ. ಆ ದಾಖಲೆಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: Apr 28, 2024 | 2:22 PM

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) ಇಂದು (ಏ.28) ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿಶೇಷ ದಾಖಲೆ ಬರೆಯುವ ಅವಕಾಶ ವಿರಾಟ್ ಕೊಹ್ಲಿ (Virat Kohli) ಮುಂದಿದೆ.

ಅಂದರೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ 76 ರನ್ ಬಾರಿಸಿದರೆ, ಟಿ20 ಕ್ರಿಕೆಟ್ನಲ್ಲಿ 12500 ರನ್ ಕಲೆಹಾಕಿದ ಮೊದಲ ಭಾರತೀಯ ಎಂಬ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಇದುವರೆಗೆ 368 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 9284 ಎಸೆತಗಳನ್ನು ಎದುರಿಸಿ 12424 ರನ್ ಕಲೆಹಾಕಿದ್ದಾರೆ. ಈ ವೇಳೆ 9 ಶತಕ ಹಾಗೂ 94 ಅರ್ಧಶತಕಗಳನ್ನು ಕೂಡ ಸಿಡಿಸಿದ್ದಾರೆ. ಇದೀಗ 12424 ರನ್ಗಳಿಗೆ 76 ರನ್ ಸೇರ್ಪಡೆಯಾದರೆ, ಟಿ20 ಕ್ರಿಕೆಟ್ನಲ್ಲಿ 12500 ರನ್ ಪೂರೈಸಿದ ವಿಶೇಷ ದಾಖಲೆ ನಿರ್ಮಾಣವಾಗಲಿದೆ.

ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ವಿರಾಟ್ ಕೊಹ್ಲಿ 9 ಇನಿಂಗ್ಸ್ಗಳಿಂದ ಒಟ್ಟು 430 ರನ್ ಕಲೆಹಾಕಿದ್ದಾರೆ. ಈ ವೇಳೆ 3 ಅರ್ಧಶತಕ ಹಾಗೂ 1 ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಒಂದು ವೇಳೆ ಗುಜರಾತ್ ಟೈಟಾನ್ಸ್ ವಿರುದ್ಧ ಕಿಂಗ್ ಕೊಹ್ಲಿ 70 ರನ್ ಬಾರಿಸಿದರೆ, ಐಪಿಎಲ್ 2024 ರಲ್ಲಿ 500 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಹೀಗಾಗಿ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಅಭಿಮಾನಿಗಳು ಮೂರಂಕಿ ಮೊತ್ತದ ಇನಿಂಗ್ಸ್ ನಿರೀಕ್ಷಿಸುತ್ತಿದ್ದಾರೆ. ಈ ನಿರೀಕ್ಷೆಯೊಂದಿಗೆ ಕಿಂಗ್ ಕೊಹ್ಲಿ ಭರ್ಜರಿ ಸೆಂಚುರಿ ಸಿಡಿಸಿ ವಿಶೇಷ ದಾಖಲೆ ಬರೆಯಲಿದ್ದಾರಾ ಕಾದು ನೋಡಬೇಕಿದೆ.
