- Kannada News Photo gallery Cricket photos IPL 2024: Virat Kohli responsible for RCB failures: Ambati Rayudu
IPL 2024: RCB ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿಯೇ ಕಾರಣ: ಅಂಬಾಟಿ ರಾಯುಡು
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2024) RCB ತಂಡವು ಮೂರು ಬಾರಿ ಫೈನಲ್ ಆಡಿದೆ. 2009 ರ ಐಪಿಎಲ್ನಲ್ಲಿ ಮೊದಲ ಬಾರಿ ಫೈನಲ್ಗೆ ಪ್ರವೇಶಿಸಿದ್ದ ಆರ್ಸಿಬಿ ಅಂತಿಮ ಹಣಾಹಣಿಯಲ್ಲಿ ಸೋಲನುಭವಿಸಿತ್ತು. ಇದಾದ ಬಳಿಕ 2011 ಮತ್ತು 2016 ರಲ್ಲಿ ಐಪಿಎಲ್ ಫೈನಲ್ ಆಡಿದ್ದರೂ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
Updated on: Apr 04, 2024 | 12:53 PM

16 ವರ್ಷಗಳು... 16 ಸೀಸನ್ಗಳು... ಆದರೆ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ... ಪ್ರತಿ ಸೀಸನ್ನಲ್ಲೂ ಲೆಕ್ಕಾಚಾರ...ಕೊನೆಗೆ ನೋವಿನ ವಿದಾಯ. ಹೀಗೆ ಕಳೆದ 16 ಸೀಸನ್ಗಳಲ್ಲಿ RCB ತಂಡದ ನೋವಿನ ವಿದಾಯದಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ ವಿರಾಟ್ ಕೊಹ್ಲಿ (Virat Kohli).

ಹೀಗೆ ಪ್ರತಿ ಬಾರಿಯೂ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಕೊಹ್ಲಿ, ಕಳೆದ 16 ವರ್ಷಗಳಿಂದ ಚೊಚ್ಚಲ ಟ್ರೋಫಿಯನ್ನು ಎದುರು ನೋಡುತ್ತಿದ್ದಾರೆ. ಈ ಸುದೀರ್ಘ ಕಾಲದ ಕನಸು ಈ ಬಾರಿಯಾದರೂ ಈಡೇರುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 16 ಸೀಸನ್ಗಳಲ್ಲಿ ಕಪ್ ಗೆಲ್ಲದಿರಲು ವಿರಾಟ್ ಕೊಹ್ಲಿ ಕೂಡ ಕಾರಣಕರ್ತರು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು. ಇದಕ್ಕೆ ಅವರದ್ದೇ ಆದ ಸ್ಪಷ್ಟನೆಗಳನ್ನು ಸಹ ನೀಡಿದ್ದಾರೆ.

ಅಂಬಾಟಿ ರಾಯುಡು ಪ್ರಕಾರ, ಆರ್ಸಿಬಿ ಕಳೆದ 16 ಸೀಸನ್ಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸದಿರಲು ವಿರಾಟ್ ಕೊಹ್ಲಿ ಕೂಡ ಕಾರಣ. ಏಕೆಂದರೆ ಕೊಹ್ಲಿ ಹಲವು ವರ್ಷಗಳ ಕಾಲ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿದ್ದರು. ಆ ಸಮಯದಲ್ಲಿ ಆಟಗಾರರ ರಿಟೈನ್, ರಿಲೀಸ್ ಮತ್ತು ಹರಾಜಿನಲ್ಲಿ ಅವರ ಅಭಿಪ್ರಾಯಗಳು ಖಂಡಿತವಾಗಿಯೂ ಇದ್ದಿರುತ್ತೆ.

ಇದಾಗ್ಯೂ ಆರ್ಸಿಬಿ ತಂಡವು ಎಂದಿಗೂ ಅತ್ಯುತ್ತಮ ಬೌಲರ್ಗಳನ್ನು ಮಾತ್ರ ಖರೀದಿಸಲೇ ಇಲ್ಲ. ಉತ್ತಮವಾಗಿ ಆಡುವ ಆಟಗಾರರಿಗೂ ಬೆಂಬಲ ನೀಡಿಲ್ಲ. ಹೀಗೆ ಆರ್ಸಿಬಿ ತಂಡದಿಂದ ಹೊರಬಿದ್ದ ಆಟಗಾರರು ಬೇರೆ ತಂಡಗಳ ಪರ ಅದ್ಭುತವಾಗಿ ಆಡಿದ್ದಾರೆ. ಇದಕ್ಕೆ ಕಾರಣ ಬೇರೆ ಫ್ರಾಂಚೈಸಿಗಳು ಮತ್ತು ನಾಯಕರುಗಳು ಅವರಿಗೆ ನೀಡಿದ ಬೆಂಬಲ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

ಈ ಹಿಂದೆ ತಂಡದಲ್ಲಿದ್ದ ಶೇನ್ ವ್ಯಾಟ್ಸನ್, ಯುಜ್ವೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ಅವರಂತಹ ಮ್ಯಾಚ್ ವಿನ್ನರ್‌ಗಳನ್ನು ಆರ್ಸಿಬಿ ಫ್ರಾಂಚೈಸಿಯು ತಂಡದಿಂದ ಕೈ ಬಿಟ್ಟಿತು. ಈ ಆಟಗಾರರು ಬೇರೆ ತಂಡಗಳ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈಗಲೂ ಆರ್ಸಿಬಿ ತಂಡದ ಕೆಲ ಮಾಜಿ ಆಟಗಾರರು ಉತ್ತಮ ಆಟ ಮುಂದುವರೆಸಿದ್ದಾರೆ. ಇದರರ್ಥ ಉತ್ತಮ ಸಾಮರ್ಥ್ಯವಿದ್ದ ಆಟಗಾರರನ್ನು ಆರ್ಸಿಬಿ ಪ್ರೋತ್ಸಾಹಿಸಿಲ್ಲ ಎಂಬುದು.

ವಿರಾಟ್ ಕೊಹ್ಲಿ ಆರ್ಸಿಬಿ ಪರ 7 ಸಾವಿರ ರನ್ ಗಳಿಸಿದ್ದಾರೆ ಎಂಬುದನ್ನು ನಾನು ಸಹ ಒಪ್ಪಿಕೊಳ್ಳುತ್ತೇನೆ. ಆದರೆ ಒಬ್ಬ ಆಟಗಾರನಿಂದ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಆರ್ಸಿಬಿ ತಂಡವೇ ದೊಡ್ಡ ಉದಾಹರಣೆ.

ಅಲ್ಲದೆ ನಾಯಕನಾದವನು ಉತ್ತಮ ತಂಡ ಕಟ್ಟದಿರುವುದರಿಂದ ಇಂದಿಗೂ ಆರ್ಸಿಬಿ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಆರ್ಸಿಬಿ ತಂಡವನ್ನು ಅತೀ ಹೆಚ್ಚು ವರ್ಷ ಮುನ್ನಡೆಸಿದ ವಿರಾಟ್ ಕೊಹ್ಲಿ ಕೂಡ ಕಾರಣ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
