ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಯಾರೆಂದರೆ ಥಟ್ಟನೆ ಬರುವ ಉತ್ತರ ವಿರಾಟ್ ಕೊಹ್ಲಿ (Virat Kohli). ಕಿಂಗ್ ಕೊಹ್ಲಿ ಇದುವರೆಗೆ 8 ಶತಕಗಳೊಂದಿಗೆ 7582 ರನ್ ಪೇರಿಸಿದ್ದಾರೆ. ಹೀಗೆ ರನ್ ಮೇಲೆ ರನ್ ಪೇರಿಸುತ್ತಾ ಸಾಗುತ್ತಿರುವ ವಿರಾಟ್ ಕೊಹ್ಲಿ ಕೆಲ ಬೌಲರ್ಗಳ ವಿರುದ್ಧ ಆಡಲು ಪರದಾಡಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.
ಅಂದರೆ ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿಯನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ಬೌಲರ್ಗಳ ಪಟ್ಟಿಯನ್ನು ತೆಗೆದುಕೊಂಡರೆ, ಸಂದೀಪ್ ಶರ್ಮಾ ಹೆಸರು ಮುಂಚೂಣಿಯಲ್ಲಿ ಕಾಣಸಿಗುತ್ತದೆ. 15 ಇನಿಂಗ್ಸ್ಗಳಲ್ಲಿ ಕೊಹ್ಲಿ ಹಾಗೂ ಸಂದೀಪ್ ಶರ್ಮಾ ಮುಖಾಮುಖಿಯಾಗಿದ್ದಾರೆ. ಈ ವೇಳೆ 7 ಬಾರಿ ಔಟ್ ಮಾಡುವಲ್ಲಿ ಸಂದೀಪ್ ಶರ್ಮಾ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಎದುರಿಸಿದ 67 ಎಸೆತಗಳಲ್ಲಿ ಕೊಹ್ಲಿ ಕಲೆಹಾಕಿದ್ದು ಕೇವಲ 87 ರನ್ಗಳು ಮಾತ್ರ. ಅಂದರೆ ಕೊಹ್ಲಿ ವಿರುದ್ಧ ಸಂದೀಪ್ ಶರ್ಮಾ ಎಲ್ಲಾ ರೀತಿಯಲ್ಲೂ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ.
ಇನ್ನು ವಿರಾಟ್ ಕೊಹ್ಲಿಯನ್ನು ಕಾಡಿದ 2ನೇ ಬೌಲರ್ ಆಶಿಶ್ ನೆಹ್ರಾ. ಕಿಂಗ್ ಕೊಹ್ಲಿ ಹಾಗೂ ನೆಹ್ರಾ ಐಪಿಎಲ್ನಲ್ಲಿ 10 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ 6 ಸಲ ಕೊಹ್ಲಿಯನ್ನು ಔಟ್ ಮಾಡುವಲ್ಲಿ ನೆಹ್ರಾ ಯಶಸ್ವಿಯಾಗಿದ್ದಾರೆ. ಇನ್ನು ನೆಹ್ರಾ ಅವರ 54 ಎಸೆತಗಳನ್ನು ಎದುರಿಸಿ ಕೊಹ್ಲಿ ಕಲೆಹಾಕಿದ್ದು ಕೇವಲ 60 ರನ್ಗಳು ಮಾತ್ರ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಇದ್ದಾರೆ. ವಿರಾಟ್ ಕೊಹ್ಲಿ ಹಾಗೂ ಬುಮ್ರಾ ಒಟ್ಟು 16 ಇನಿಂಗ್ಸ್ಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ 95 ಎಸೆತಗಳನ್ನು ಎದುರಿಸಿರುವ ಕೊಹ್ಲಿ 140 ರನ್ ಕಲೆಹಾಕಿದ್ದಾರೆ. ಇದೇ ವೇಳೆ ಕೊಹ್ಲಿಯನ್ನು 5 ಬಾರಿ ಔಟ್ ಮಾಡುವಲ್ಲಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದಾರೆ.
ಹಾಗೆಯೇ ಮೊಹಮ್ಮದ್ ಶಮಿ ಕೂಡ ವಿರಾಟ್ ಕೊಹ್ಲಿಯನ್ನು 5 ಬಾರಿ ಔಟ್ ಮಾಡಿದ್ದಾರೆ. 12 ಪಂದ್ಯಗಳಲ್ಲಿ ಕೊಹ್ಲಿ-ಶಮಿ ಮುಖಾಮುಖಿಯಾಗಿದ್ದು, ಈ ವೇಳೆ 77 ಎಸೆತಗಳನ್ನು ಎದುರಿಸಿರುವ ವಿರಾಟ್ 107 ರನ್ ಗಳಿಸಿದ್ದಾರೆ.
Published On - 10:09 am, Sun, 14 April 24