- Kannada News Photo gallery Cricket photos IPL 2024 Mumbai Indians Out Of Playoffs after srh beat lsg by 10 wickets
IPL 2024: ಮುಂಬೈ ಔಟ್! ಆರ್ಸಿಬಿ ಕಥೆ ಏನು? ಇಲ್ಲಿದೆ ಸಂಪೂರ್ಣ ಪ್ಲೇಆಫ್ ಲೆಕ್ಕಾಚಾರ
IPL 2024: ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರೆ, ಲಕ್ನೋ ಸೂಪರ್‌ಜೈಂಟ್ಸ್ ತಂಡ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ ಈ ಪಂದ್ಯದ ಫಲಿತಾಂಶದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ತಲುಪುವ ಕನಸು ಅಧಿಕೃತವಾಗಿ ಭಗ್ನಗೊಂಡಿದೆ.
Updated on: May 08, 2024 | 11:27 PM

ಬುಧವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ 10 ವಿಕೆಟ್ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ಲಕ್ನೋ ನೀಡಿದ 166 ರನ್ಗಳ ಗುರಿಯನ್ನು ಸನ್ ರೈಸರ್ಸ್ ಕೇವಲ 9.4 ಓವರ್ಗಳಲ್ಲಿ ಸಾಧಿಸಿತು.

ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರೆ, ಲಕ್ನೋ ಸೂಪರ್‌ಜೈಂಟ್ಸ್ ತಂಡ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ ಈ ಪಂದ್ಯದ ಫಲಿತಾಂಶದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ತಲುಪುವ ಕನಸು ಅಧಿಕೃತವಾಗಿ ಭಗ್ನಗೊಂಡಿದೆ.

ಏಕೆಂದರೆ ಮುಂಬೈ ಇಂಡಿಯನ್ಸ್ ತಂಡ ಇದುವರೆಗೆ 12 ಪಂದ್ಯಗಳನ್ನಾಡಿದ್ದು 4 ಗೆಲುವು ಹಾಗೂ 8 ಸೋಲಿನೊಂದಿಗೆ ಕೇವಲ 8 ಅಂಕಗಳನ್ನು ತನ್ನ ಖಾತೆಯಲ್ಲಿ ಇಟ್ಟುಕೊಂಡಿದೆ. ಮುಂಬೈ ಉಳಿದಿರುವ ಇನ್ನೇರಡು ಪಂದ್ಯಗಳನ್ನು ಗೆದ್ದರೂ ಅದರ ಬಳಿ ಕೇವಲ 12 ಅಂಕಗಳು ಮಾತ್ರ ಇರಲಿವೆ.

ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡಗಳು ಈಗಾಗಲೇ 12 ಅಂಕ ಕಲೆಹಾಕಿ ಪ್ಲೇಆಫ್ ರೇಸ್ನಲ್ಲಿ ಪೈಪೋಟಿಯಲ್ಲಿವೆ. ಚೆನ್ನೈ ತಂಡಕ್ಕೆ ಇನ್ನು 3 ಪಂದ್ಯ ಬಾಕಿ ಇದ್ದು, ಡೆಲ್ಲಿ ಹಾಗೂ ಲಕ್ನೋಗೆ ಇನ್ನು 2 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಈ ಮೂರು ತಂಡಗಳು ಒಂದೇ ಒಂದು ಗೆಲುವು ದಾಖಲಿಸಿದರೆ 14 ಅಂಕ ಸಂಪಾದಿಸಿದ್ದಂತ್ತಾಗುತ್ತದೆ.

ಇನ್ನು ಪಾಯಿಂಟ್ ಪಟ್ಟಿಯಲ್ಲಿ ಟಾಪ್ ಮೂರರಲ್ಲಿರುವ ತಂಡಗಳ ಬಗ್ಗೆ ಹೇಳುವುದಾದರೆ.. ಕೆಕೆಆರ್ ಹಾಗೂ ರಾಜಸ್ಥಾನ್ ತಲಾ 11 ಪಂದ್ಯಗಳಿಂದ 16 ಅಂಕ ಸಂಪಾದಿಸಿ ಪ್ಲೇಆಫ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಇದೀಗ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಕೂಡ ಇನ್ನೊಂದು ಪಂದ್ಯ ಗೆದ್ದರೆ ಪ್ಲೇಆಫ್‌ಗೇರುವುದು ಖಚಿತವಾಗಲಿದೆ.

ಹೀಗಾಗಿ ನಾಲ್ಕನೇ ಸ್ಥಾನಕ್ಕಾಗಿ ಮುಂಬೈ ಹೊರತುಪಡಿಸಿ ಉಳಿದ 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಇದರಲ್ಲಿ ಆರ್ಸಿಬಿ, ಪಂಜಾಬ್, ಗುಜರಾತ್ ಪ್ಲೇಆಫ್ ಹಾದಿ ಸುಗಮವಲ್ಲದಿದ್ದರೂ ಈ ಮೂರು ತಂಡಗಳು ಪ್ಲೇಆಫ್ ರೇಸ್ನಿಂದ ಇನ್ನು ಅಧಿಕೃತವಾಗಿ ಹೊರಬಿದ್ದಿಲ್ಲ.

ಇನ್ನು ನಾವು ಆರ್ಸಿಬಿ ಪ್ಲೇಆಫ್ ಹಾದಿಯ ಬಗ್ಗೆ ಹೇಳುವುದಾದರೆ.. ಫಾಫ್ ಪಡೆ ಉಳಿದ ಮೂರು ಪಂದ್ಯಗಳನ್ನು ಗೆದ್ದರೆ 14 ಅಂಕ ಸಂಪಾದಿಸಲಿದೆ. ಆದರೆ ಈಗಾಗಲೇ 12 ಅಂಕ ಸಂಪಾದಿಸಿರುವ ಚೆನ್ನೈ, ಡೆಲ್ಲಿ, ಲಕ್ನೋ ಉಳಿದ ಪಂದ್ಯಗಳಲ್ಲಿ ಸೋಲಬೇಕು.

ಈ ಮೂರು ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಆಗ 14 ಅಂಕ ಈ ಮೂರು ತಂಡಗಳ ಬಳಿ ಇರುತ್ತದೆ. ಆರ್ಸಿಬಿ ಕೂಡ ಉಳಿದ ಪಂದ್ಯಗಳನ್ನು ಗೆದ್ದರೆ ಅದರ ಬಳಿಯೂ 14 ಅಂಕ ಇರುತ್ತದೆ. ಈ ವೇಳೆ ನೆಟ್ ರನ್ರೇಟ್ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಆರ್ಸಿಬಿ ಗೆಲ್ಲುವುದಲ್ಲದೆ ಭಾರಿ ಅಂತರದಿಂದ ಗೆಲ್ಲಬೇಕಾದ ಅಗತ್ಯತೆ ಇದೆ.




