- Kannada News Photo gallery Cricket photos IPL 2024 RCB vs LSG mayank yadav creat history in ipl to win player of the match award in first two matches
IPL 2024 RCB vs LSG: ಐಪಿಎಲ್ ಇತಿಹಾಸದಲ್ಲೇ ಈ ದಾಖಲೆ ಬರೆದ ಮೊದಲ ವೇಗಿ ಮಯಾಂಕ್..!
IPL 2024 Mayank Yadav: ಈ ಪಂದ್ಯದಲ್ಲಿ ತಮ್ಮ ಖೋಟಾದ 4 ಓವರ್ ಬೌಲ್ ಮಾಡಿದ ಮಯಾಂಕ್ ಕೇವಲ 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕೊನೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಯಾಂಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಯಾವ ವೇಗಿಯೂ ಮಾಡದ ದಾಖಲೆ ಮಾಡಿದರು.
Updated on: Apr 03, 2024 | 3:56 PM

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ ಸೋಲಿಗೆ ಶರಣಾಗಿದೆ. ಈ ಮೂಲಕ ಫಾಫ್ ಪಡೆ ಲೀಗ್ನಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿದೆ. ಪಂದ್ಯದಲ್ಲಿ ಲಕ್ನೋ ನೀಡಿದ 182 ರನ್ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 153 ರನ್ ಗಳಿಸಲಷ್ಟೇ ಶಕ್ತವಾಗಿ 28 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಲಕ್ನೋ ಬೌಲರ್ಗಳ ಕರಾರುವಕ್ಕಾದ ದಾಳಿ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ಐಪಿಎಲ್ನಲ್ಲಿ ಆಡಿದ ಎರಡೇ ಎರಡು ಪಂದ್ಯಗಳಲ್ಲಿ ವಿಶ್ವ ಕ್ರಿಕೆಟ್ನ ಮನಗೆದ್ದಿರುವ ಮಯಾಂಕ್ ಯಾದವ್ ಪ್ರಮುಖ 3 ವಿಕೆಟ್ಗಳನ್ನು ಉರುಳಿಸಿ ಆರ್ಸಿಬಿಯ ಬ್ಯಾಟಿಂಗ್ ಬೆನ್ನೇಲುಬ್ಬನೇ ಮುರಿದರು.

ಮಯಾಂಕ್ ದಾಳಿಗೆ ಮಂಡಿಯೂರಿದವರಲ್ಲಿ ರಜತ್ ಪಾಟಿದರ್ (29 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (0 ರನ್), ಕ್ಯಾಮರೂನ್ ಗ್ರೀನ್ (9 ರನ್) ಸೇರಿದ್ದರು. ಈ ಮೂವರು ಆಟಗಾರರ ವಿಕೆಟ್ ಪತನ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಈ ಪಂದ್ಯದಲ್ಲಿ ತಮ್ಮ ಖೋಟಾದ 4 ಓವರ್ ಬೌಲ್ ಮಾಡಿದ ಮಯಾಂಕ್ ಕೇವಲ 14 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಕೊನೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಯಾಂಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಯಾವ ವೇಗಿಯೂ ಮಾಡದ ದಾಖಲೆ ಮಾಡಿದರು.

ವಾಸ್ತವವಾಗಿ ಮಯಾಂಕ್ಗೆ ಇದು ಚೊಚ್ಚಲ ಐಪಿಎಲ್ ಆವೃತ್ತಿ. ಮಯಾಂಕ್ ಇದುವರೆಗೆ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆರ್ಸಿಬಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಆಡಿದ್ದ ಮಯಾಂಕ್ಗೆ ಅದು ಅವರ ಚೊಚ್ಚಲ ಐಪಿಎಲ್ ಪಂದ್ಯವಾಗಿತ್ತು.

ಆ ಪಂದ್ಯದಲ್ಲೂ ತಮ್ಮ ಖೋಟಾದ ನಾಲ್ಕು ಓವರ್ ಬೌಲ್ ಮಾಡಿದ್ದ ಮಯಾಂಕ್ ಕೇವಲ 27 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಬಳಿಸಿದ್ದರು. ಇದು ಲಕ್ನೋ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಹೀಗಾಗಿ ಆಡಿದ ಮೊದಲ ಪಂದ್ಯದಲ್ಲೇ ಮಯಾಂಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದೀಗ ಆರ್‌ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಮಯಾಂಕ್, ಐಪಿಎಲ್ ಇತಿಹಾಸದಲ್ಲೇ ತಮ್ಮ ಚೊಚ್ಚಲ ಆವೃತ್ತಿಯಲ್ಲೇ ಆಡಿದ ಮೊದಲೆರಡು ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಮಯಾಂಕ್ಗೂ ಮೊದಲು ಬೇರೆ ಯಾವ ವೇಗಿಯೂ ಈ ಸಾಧನೆ ಮಾಡಿರಲಿಲ್ಲ.




