ಐಪಿಎಲ್ 45ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಆರ್ಸಿಬಿ, ಲೀಗ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಆರ್ಸಿಬಿಯ ಈ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಹಾಗೂ ವಿಲ್ ಜ್ಯಾಕ್ಸ್ ಪ್ರಮುಖ ಪಾತ್ರವಹಿಸಿದರು.
ವಿಲ್ ಜ್ಯಾಕ್ಸ್ ಅಜೇಯ ಶತಕ ಸಿಡಿಸಿದರೆ, ವಿರಾಟ್ ಕೊಹ್ಲಿ ಅಜೇಯ ಅರ್ಧಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 44 ಎಸೆತಗಳನ್ನು ಎದುರಿಸಿದ ವಿರಾಟ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 70 ರನ್ ಚಚ್ಚಿದರು. ಈ ಮೂಲಕ ಕೊಹ್ಲಿ ಆಮೆಗತಿಯ ಬ್ಯಾಟಿಂಗ್ ಮಾಡುತ್ತಾರೆ. ಅವರ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ ಎನ್ನುವವರಿಗೆ ಖಡಕ್ ಉತ್ತರ ನೀಡಿದ್ದಾರೆ.
ಅಲ್ಲದೆ ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್, ‘ನನ್ನ ಸ್ಟ್ರೈಕ್ ರೇಟ್ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಅಲ್ಲದೆ ನನಗೆ ಸ್ಪಿನ್ನರ್ಗಳಿಗೆ ಚೆನ್ನಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಆದರೆ ನಾನು ಮೈದಾನದಲ್ಲಿರುವಾಗ, ನನ್ನ ಗಮನವು ಪಂದ್ಯವನ್ನು ಗೆಲ್ಲುವುದರ ಮೇಲೆ ಮಾತ್ರವೇ ಹೊರತು ವೈಯಕ್ತಿಕ ದಾಖಲೆಗಳ ಮೇಲೆ ಅಲ್ಲ.
ಇನ್ನು ನನ್ನ ಸ್ಟ್ರೈಕ್ ರೇಟ್ ಬಗ್ಗೆ ರೂಮಿನೊಳಗೆ ಕುಳಿತು ಗೇಲಿ ಮಾಡುವವರು ಬಹಳ ಮಂದಿ ಇದ್ದಾರೆ. ಆದರೆ ಇಲ್ಲಿ ಆಡುವವರೇ ಮೈದಾನದಲ್ಲಿ ಏನಾಗುತ್ತಿದೆ ಎಂದು ಹೇಳಬಲ್ಲರು. ಸ್ಟ್ರೈಕ್ ರೇಟ್ ಬಗ್ಗೆ ಒಳಗೆ ಕುಳಿತು ಮಾತನಾಡುವುದು ತುಂಬಾ ಸುಲಭ, ಆದರೆ ವಾಸ್ತವವು ಬೇರೆಯೇ ಆಗಿದೆ ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.
ಇದಲ್ಲದೆ ವಿಲ್ ಜ್ಯಾಕ್ಸ್ ಜೊತೆಗಿನ ಜೊತೆಯಾಟ ಹಾಗೂ ಜ್ಯಾಕ್ಸ್ ಅವರ ಸ್ಫೋಟಕ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಕೊಹ್ಲಿ, ‘ಜ್ಯಾಕ್ಸ್ ಆರಂಭದಲ್ಲಿ ಅಂದುಕೊಂಡಂತೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಸ್ವಲ್ಪ ಕೋಪಗೊಂಡಿದ್ದರು. ಆದರೆ ನಾವಿಬ್ಬರು ಒಬ್ಬರಿಗೊಬ್ಬರು ಸಾಥ್ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವು.
ಏಕೆಂದರೆ ಒಮ್ಮೆ ಜ್ಯಾಕ್ಸ್ ಕ್ರೀಸ್ನಲ್ಲಿ ಸೆಟ್ ಆದರೆ ಅವರು ಎಷ್ಟು ಅಪಾಯಕಾರಿಯಾಗುತ್ತಾರೆ ಎಂಬುದು ನಮಗೆ ತಿಳಿದಿತ್ತು. ಮೋಹಿತ್ ಶರ್ಮಾ ಅವರ ಓವರ್‌ನಲ್ಲಿ ಜ್ಯಾಕ್ಸ್ ಸಾಕಷ್ಟು ರನ್ ಗಳಿಸಿದ ತಕ್ಷಣ, ನನ್ನ ಪಾತ್ರವು ಸಂಪೂರ್ಣವಾಗಿ ಬದಲಾಯಿತು.
ಜ್ಯಾಕ್ಸ್ ಆಕ್ರಮಣಕಾರಿ ಆಟಕ್ಕೆ ಮುಂದಾದ ನಂತರ ನಾನು ಇನ್ನೊಂದು ತುದಿಯಲ್ಲಿ ನಿಂತು ಜ್ಯಾಕ್ಸ್ ಆಟವನ್ನು ನೋಡುತ್ತ ಸಂಭ್ರಮಿಸಿದೆ. ನಾವು 19 ಓವರ್‌ಗಳಲ್ಲಿ ಪಂದ್ಯವನ್ನು ಗೆಲ್ಲಬಹುದು ಎಂದು ನಾನು ಭಾವಿಸಿದೆವು. ಆದರೆ ಅದನ್ನು 16 ಓವರ್‌ಗಳಲ್ಲಿ ಮುಗಿಸಿದ್ದು ಅದ್ಭುತವಾಗಿತ್ತು ಎಂದರು.
Published On - 10:52 pm, Sun, 28 April 24