- Kannada News Photo gallery Cricket photos IPL 2024: RCB wrapped up the chase with four overs left to spare
IPL 2024: RCB ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ದಾಖಲೆ ಉಡೀಸ್
IPL 2024: ಐಪಿಎಲ್ 2024ರ 45ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 200 ರನ್ ಕಲೆಹಾಕಿತು. ಈ ಗುರಿಯನ್ನು 16 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಆರ್ಸಿಬಿ 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಆರ್ಸಿಬಿ ಮುಂಬೈ ಇಂಡಿಯನ್ಸ್ ತಂಡದ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಮುರಿದಿದೆ.
Updated on: Apr 29, 2024 | 7:33 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಅಹಮದಾಬಾದ್ನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ (84) ಹಾಗೂ ಶಾರುಖ್ ಖಾನ್ (58) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ಗಳನ್ನು ಕಲೆಹಾಕಿತು.

201 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ (70) ಹಾಗೂ ಫಾಫ್ ಡುಪ್ಲೆಸಿಸ್ (24) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಲ್ ಜಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಜಾಕ್ಸ್ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹಾಫ್ ಸೆಂಚುರಿ ಪೂರ್ಣಗೊಳ್ಳುತ್ತಿದ್ದಂತೆ ಅಬ್ಬರಿಲಾರಂಭಿಸಿದರು. ಪರಿಣಾಮ ಮುಂದಿನ 10 ಎಸೆತಗಳಲ್ಲಿ 50 ರನ್ ಕಲೆಹಾಕುವ ಮೂಲಕ ಕೇವಲ 41 ಬಾಲ್ಗಳಲ್ಲಿ ಸೆಂಚುರಿ ಸಿಡಿಸಿದರು. ಈ ಮೂಲಕ 16 ಓವರ್ಗಳಲ್ಲಿ ಆರ್ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಈ ಗೆಲುವಿನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಎಸೆತಗಳು ಬಾಕಿ ಉಳಿಸಿ 200+ ರನ್ಗಳನ್ನು ಚೇಸ್ ಮಾಡಿದ ಭರ್ಜರಿ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ಹೆಸರಿನಲ್ಲಿತ್ತು.

2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆರ್ಸಿಬಿ ವಿರುದ್ಧ 21 ಎಸೆತಗಳನ್ನು ಬಾಕಿ ಉಳಿಸಿ 200 ರನ್ಗಳನ್ನು ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿತ್ತು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ.

ಗುಜರಾತ್ ಟೈಟಾನ್ಸ್ ವಿರುದ್ಧ 24 ಎಸೆತಗಳು ಬಾಕಿಯಿರುವಾಗಲೇ ಆರ್ಸಿಬಿ ತಂಡ ಗುರಿ ಮುಟ್ಟಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಎಸೆತಗಳನ್ನು ಉಳಿಸಿ 200+ ರನ್ಗಳನ್ನು ಚೇಸ್ ಮಾಡಿದ ವಿಶೇಷ ದಾಖಲೆಯೊಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿದೆ.
