
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಶನಿವಾರದಿಂದ ಆರಂಭವಾಗಲಿರುವ ಐಪಿಎಲ್ನ ದ್ವಿತೀಯಾರ್ಧದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ರಜತ್ ಪಾಟಿದಾರ್ ಅವರ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಬ್ಯಾಂಡೇಜ್ ಹಾಕಿಕೊಂಡಿದ್ದ ಪಾಟಿದಾರ್ಗೆ ವೈದ್ಯರು ಕೆಲ ದಿನಗಳವರೆಗೆ ವಿಶ್ರಾಂತಿ ಸೂಚಿಸಿದ್ದರು. ಇದೀಗ ವಿಶ್ರಾಂತಿ ಮುಗಿಸಿ ರಜತ್ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ.

ರಜತ್ ಪಾಟಿದಾರ್ ಬೆಂಗಳೂರಿನಲ್ಲಿ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದು, ಈ ವೇಳೆ ಅವರ ಕೈಗೆ ಹಾಕಲಾಗಿರುವ ಬ್ಯಾಂಡೇಜ್ ಅನ್ನು ಬಿಚ್ಚಿರುವುದು ಕಂಡು ಬಂದಿದೆ. ಇದೇ ವೇಳೆ ಯಾವುದೇ ಸಮಸ್ಯೆ ಇಲ್ಲದಂತೆ ಭಾಸವಾಗಿದ್ದಾರೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

ಇದಕ್ಕೂ ಮುನ್ನ ಬೆರಳಿಗೆ ಗಾಯವಾಗಿರುವ ಕಾರಣ ರಜತ್ ಪಾಟಿದಾರ್ ಕೆಲ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ ಎನ್ನಲಾಗಿತ್ತು. ಅಷ್ಟೇ ಅಲ್ಲದೆ ಪಾಟಿದಾರ್ ಬದಲಿಗೆ ಆರ್ಸಿಬಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ಜಿತೇಶ್ ಶರ್ಮಾಗೆ ವಹಿಸಲಾಗಿತ್ತು. ಆದರೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಪಾಟಿದಾರ್ ಆರ್ಸಿಬಿ ತಂಡಕ್ಕೆ ಮರಳಿದ್ದು, ಹೀಗಾಗಿ ಉಳಿದ ಪಂದ್ಯಗಳಲ್ಲಿ ಅವರೇ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ ಅನ್ನು ಒಂದು ವಾರದವರೆಗೆ ಮುಂದೂಡಿದ್ದು, ಆರ್ಸಿಬಿ ಪಾಲಿಗೆ ವರವಾಗಿ ಪರಿಣಮಿಸಿದೆ. ಏಕೆಂದರೆ ಈ ಒಂದು ವಾರದ ಅವಧಿಯಲ್ಲಿ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಬೆರಳಿನ ಗಾಯವು ಗುಣವಾಗಿದೆ. ಇದರೊಂದಿಗೆ ಆರ್ಸಿಬಿ ತಂಡದ ಉಳಿದ ಪಂದ್ಯಗಳಲ್ಲೂ ರಜತ್ ಪಾಟಿದಾರ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.