IPL 2025: ಐಪಿಎಲ್ ಮೆಗಾ ಹರಾಜಿಗಾಗಿ 574 ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಆಟಗಾರರಲ್ಲಿ ಇಂಗ್ಲೆಂಡ್ನ 37 ಪ್ಲೇಯರ್ಸ್ ಕಾಣಿಸಿಕೊಂಡಿದ್ದಾರೆ. ಆದರೆ ಇವರಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿತ್ತು.
ಏಕೆಂದರೆ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೀಡಿದವರಲ್ಲಿ ಜೋಫ್ರಾ ಆರ್ಚರ್ ಕೂಡ ಒಬ್ಬರು. ಆದರೆ ಅಂತಿಮ ಪಟ್ಟಿಯಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಇದಕ್ಕೆ ಮುಖ್ಯ ಕಾರಣ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆರ್ಚರ್ಗೆ ಐಪಿಎಲ್ ಆಡಲು ಅನುಮತಿ ನೀಡದಿರುವುದು ಎಂದು ತಿಳಿದು ಬಂದಿದೆ.
ಮುಂಬರುವ ಟೆಸ್ಟ್ ಸರಣಿಗಳನ್ನು ಕೇಂದ್ರೀಕರಿಸಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕೆಲ ಆಟಗಾರರಿಗೆ ಎನ್ಒಸಿ ನೀಡಲು ನಿರಾಕರಿಸಿದೆ. ಇದರಿಂದಾಗಿ ಇಂಗ್ಲೆಂಡ್ ವೇಗದ ಬೌಲರ್ಗಳಾದ ಮಾರ್ಕ್ ವುಡ್ ಹಾಗೂ ಜೋಫ್ರಾ ಆರ್ಚರ್ ಹೆಸರುಗಳು ಅಂತಿಮ ಪಟ್ಟಿಯಿಂದ ಹೊರಬಿದ್ದಿದ್ದವು.
ಆದರೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿಲುವಿಗೆ ಜೋಫ್ರಾ ಆರ್ಚರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂಬರುವ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಇಚ್ಛಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜೋಫ್ರಾ ಆರ್ಚರ್ ಇಸಿಬಿ ಜೊತೆ ಚರ್ಚಿಸಿದ್ದು, ಹೀಗಾಗಿ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ವೇಗಿಯ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇತ್ತ ಮೆಗಾ ಹರಾಜಿಗೂ ಮುನ್ನ ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ಗೆ ಸೇರಿಸಲು ಅವಕಾಶವಿದೆ. ಇದೀಗ ಜೋಫ್ರಾ ಆರ್ಚರ್ ಐಪಿಎಲ್ ಆಡಲು ಬಯಸಿರುವುದರಿಂದ ಕೊನೆಯ ಕ್ಷಣದಲ್ಲಿ ಅವರ ಹೆಸರು ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕ್ರಿಕೆಟ್ ಬ್ರಾಡ್ಕಾಸ್ಟರ್ ಮ್ಯಾಟ್ ಕಬೀರ್ ಫ್ಲೋಡ್ ತಿಳಿಸಿದ್ದಾರೆ. ಅದರಂತೆ ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ 575ನೇ ಆಟಗಾರನಾಗಿ ಜೋಫ್ರಾ ಆರ್ಚರ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
Published On - 8:30 am, Thu, 21 November 24