IPL 2025 Auction: ಮೊದಲ ದಿನ ಮೂವರು ಕನ್ನಡಿಗರು ಅನ್ಸೋಲ್ಡ್
IPL 2025 Auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿನ ಮೊದಲ ದಿನದ ಬಿಡ್ಡಿಂಗ್ನಲ್ಲಿ 72 ಆಟಗಾರರು ಬಿಕರಿಯಾಗಿದ್ದಾರೆ. ಇವರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ರಿಷಭ್ ಪಂತ್. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ.
Updated on:Nov 26, 2024 | 7:13 AM

ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಐಪಿಎಲ್ ಸೀಸನ್-18ರ ಮೆಗಾ ಹರಾಜಿನ ಮೊದಲ ದಿನ 12 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಈ ಹನ್ನೆರಡು ಆಟಗಾರರಲ್ಲಿ ಮೂವರು ಕನ್ನಡಿಗರಿರುವುದು ವಿಶೇಷ. ಹಾಗಿದ್ರೆ ಮೊದಲ ದಿನ ಬಿಕರಿಯಾಗದೇ ಉಳಿದ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ....

ದೇವದತ್ ಪಡಿಕ್ಕಲ್: 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕರ್ನಾಟಕದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಮೊದಲ ದಿನದ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದಾರೆ. ಕಳೆದ ಸೀಸನ್ನಲ್ಲಿ ಪಡಿಕ್ಕಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು.

ಲವ್ನೀತ್ ಸಿಸೋಡಿಯಾ: ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಲವ್ನೀತ್ ಸಿಸೋಡಿಯಾ ಈ ಬಾರಿಯ ಮೆಗಾ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಮೊದಲ ದಿನದ ಹರಾಜಿನಲ್ಲಿ ಆರ್ಸಿಬಿಯ ಮಾಜಿ ಆಟಗಾರನನ್ನು ಖರೀದಿಸಲು ಫ್ರಾಂಚೈಸಿಗಳು ಹಿಂದೇಟು ಹಾಕಿದೆ.

ಶ್ರೇಯಸ್ ಗೋಪಾಲ್: ಸ್ಪಿನ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಕೂಡ ಮೊದಲ ದಿನದ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಕನ್ನಡಿಗನ ಖರೀದಿಗೆ ಮೊದಲ ದಿನ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

ಈ ಮೂವರಲ್ಲದೆ ಮೊದಲ ದಿನದ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರೆಂದರೆ... ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ಕಾರ್ ಸಲಾಮ್ಖೈಲ್, ಯಶ್ ಧುಲ್, ಅನ್ಮೋಲ್ಪ್ರೀತ್ ಸಿಂಗ್, ಉತ್ಕರ್ಷ್ ಸಿಂಗ್, ಕಾರ್ತಿಕ್ ತ್ಯಾಗಿ, ಉಪೇಂದ್ರ ಯಾದವ್, ಪಿಯೂಷ್ ಚಾವ್ಲಾ.

ಇನ್ನು ಮೊದಲ ದಿನ ಮಾರಾಟವಾಗದೇ ಉಳಿದ ಆಟಗಾರರ ಪಟ್ಟಿಯನ್ನು ಕೊನೆಯ ಸುತ್ತಿನ ಹರಾಜಿನ ವೇಳೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅದರಂತೆ ಅಂತಿಮ ಸುತ್ತಿನಲ್ಲಿ ಅನ್ಸೋಲ್ಡ್ ಆಟಗಾರರಿಗಾಗಿ ಮತ್ತೆ ಬಿಡ್ಡಿಂಗ್ ನಡೆಯಲಿದೆ. ಹೀಗಾಗಿ ಮೊದಲ ದಿನ ಬಿಕರಿಯಾಗದೇ ಉಳಿದ ಆಟಗಾರರಿಗೆ ಎರಡನೇ ದಿನ ಅದೃಷ್ಟ ಖುಲಾಯಿಸಬಹುದು.
Published On - 9:04 am, Mon, 25 November 24
