
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 61ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸೋಲನುಭವಿಸಿದೆ. ಈ ಸೋಲಿಗೆ ಒಂದು ಕಾರಣ ಮಹೇಂದ್ರ ಸಿಂಗ್ ಧೋನಿಯ (MS Dhoni) ನಿಧಾನಗತಿಯ ಬ್ಯಾಟಿಂಗ್. ಏಕೆಂದರೆ ಡೆತ್ ಓವರ್ಗಳ ವೇಳೆ ಬ್ಯಾಟ್ ಬೀಸಿದ ಧೋನಿ ರನ್ಗಳಿಸಲು ಪರದಾಡಿದ್ದರು.

ಅದರಲ್ಲೂ ತಾನೆದುರಿಸಿದ ಮೊದಲ 6 ಎಸೆತಗಳಲ್ಲಿ ಧೋನಿ ಕಲೆಹಾಕಿದ್ದು ಕೇವಲ 3 ರನ್ಗಳು. ಇದಾದ ಬಳಿಕ ಒಂದು ಸಿಕ್ಸ್ ಬಾರಿಸಿದರು. ಆ ಬಳಿಕ ಒಂದೇ ಒಂದು ಫೋರ್ ಬಾರಿಸಲಿಲ್ಲ ಎಂಬುದು ವಿಶೇಷ. ಅಂದರೆ ಮೊದಲ 7 ಎಸೆತಗಳಲ್ಲಿ 9 ರನ್ ಕಲೆಹಾಕಿದ ಧೋನಿ ಆನಂತರ 10 ಎಸೆತಗಳಲ್ಲಿ ಗಳಿಸಿದ್ದು ಕೇವಲ 7 ರನ್ಗಳು ಮಾತ್ರ.

ನಿರ್ಣಾಯಕ ಹಂತದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸುವ ಮೂಲಕ ಧೋನಿ ಕಲೆಹಾಕಿದ್ದು ಕೇವಲ 16 ರನ್ಗಳು. ಇದಕ್ಕಾಗಿ 17 ಎಸೆತಗಳನ್ನು ತೆಗೆದುಕೊಂಡರು. ಧೋನಿಯ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ 200ರ ಗಡಿದಾಟಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಕೋರ್ 187 ರನ್ಗಳಲ್ಲೇ ಉಳಿಯಿತು.

ಹೀಗಾಗಿಯೇ ಇದೀಗ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ಅನ್ನು ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲೂ ಅಂತಿಮ ಓವರ್ಗಳ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾಗಿರುವ ಧೋನಿ ನಿವೃತ್ತಿ ಘೋಷಿಸಲು ಇದು ಸೂಕ್ತ ಸಮಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಧೋನಿದು ಭರ್ಜರಿ ಅಲ್ಲ, ಸರ್ಜರಿ ಬ್ಯಾಟಿಂಗ್ ಎಂದು ಲೇವಡಿ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕಳಪೆ ಬ್ಯಾಟಿಂಗ್ ಪರಿಣಾಮ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ ಕೇವಲ 187 ರನ್ ಕಲೆಹಾಕಿತು. ಈ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡವು 17.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.