
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪ್ಲೇಆಫ್ನಲ್ಲಿ ಕಣಕ್ಕಿಳಿಯುವ ಮೂರು ತಂಡಗಳು ಫೈನಲ್ ಆಗಿವೆ. ಅದರಂತೆ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ದ್ವಿತೀಯ ಸುತ್ತಿನಲ್ಲಿ ಕಣಕ್ಕಿಳಿಯಲಿವೆ.

ಆದರೆ ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವಾಡುವ ತಂಡಗಳಾವುವು ಎಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಏಕೆಂದರೆ ಎಲ್ಲಾ ತಂಡಗಳಿಗೂ ಇನ್ನೂ ಕೆಲ ಪಂದ್ಯಗಳು ಬಾಕಿಯಿದ್ದು, ಈ ಪಂದ್ಯಗಳ ಮೂಲಕ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಲು ಮೂರು ತಂಡಗಳಿವೆ ಅವಕಾಶವಿದೆ. ಆ ತಂಡಗಳಾವುವು ಎಂದು ನೋಡುವುದಾದರೆ....

ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ ಮುಂದಾಳತ್ವದ ಗುಜರಾತ್ ಟೈಟಾನ್ಸ್ ತಂಡವು ಈವರೆಗೆ 12 ಪಂದ್ಯಗಳನ್ನಾಡಿದೆ. ಈ ವೇಳೆ 9 ಪಂದ್ಯಗಳಲ್ಲಿ ಜಯ ಸಾಧಿಸಿ 18 ಅಂಕಗಳನ್ನು ಪಡೆದುಕೊಂಡಿದೆ. ಮುಂದಿನ 2 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ದಾಖಲಿಸಿದರೆ 22 ಅಂಕಗಳೊಂದಿಗೆ ಅಗ್ರಸ್ಥಾನದೊಂದಿಗೆ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ ಸಾರಥ್ಯದ ಆರ್ಸಿಬಿ ತಂಡವು ಈವರೆಗೆ 12 ಪಂದ್ಯಗಳನ್ನಾಡಿದ್ದು, ಈ ವೇಳೆ 8 ಜಯಗಳಿಸಿದರೆ, ಒಂದು ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಮುಂದಿನ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ 21 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಅಥವಾ ದ್ವಿತೀಯ ಸ್ಥಾನಕ್ಕೇರಬಹುದು. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆಗಿಟ್ಟಿಸಿಕೊಳ್ಳಬಹುದು.

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಈವರೆಗೆ 12 ಮ್ಯಾಚ್ಗಳನ್ನಾಡಿದ್ದು, ಈ ವೇಳೆ 8 ಜಯಗಳಿಸಿ ಒಟ್ಟು 17 ಅಂಕಗಳನ್ನು ಕಲೆಹಾಕಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಕಿಂಗ್ಸ್ ಪಡೆ ಗೆಲುವು ದಾಖಲಿಸಿದರೆ ಒಟ್ಟು 21 ಅಂಕಗಳನ್ನು ಪಡೆಯಬಹುದು. ಈ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶವನ್ನು ಎದುರು ನೋಡಬಹುದು.

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ 13 ಪಂದ್ಯಗಳನ್ನಾಡಿದೆ. ಈ ವೇಳೆ 8 ಜಯ ಸಾಧಿಸಿ 16 ಅಂಕಗಳನ್ನು ಪಡೆದುಕೊಂಡಿದೆ. ಇನ್ನುಳಿದ 1 ಪಂದ್ಯದಲ್ಲಿ ಜಯ ಸಾಧಿಸಿದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಒಂದು ವೇಳೆ ಆರ್ಸಿಬಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತನ್ನ ಮುಂದಿನ ಪಂದ್ಯಗಳಲ್ಲಿ ಸತತ ಸೋಲನುಭವಿಸಿದರೆ, 18 ಅಂಕಗಳೊಂದಿಗೆ ಮುಂಬೈ ಇಂಡಿಯನ್ಸ್ ಮೊದಲ ಅಥವಾ ದ್ವಿತೀಯ ಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್ ಪಂದ್ಯವಾಡಲು ಅರ್ಹತೆ ಪಡೆಯಬಹುದು.

ಒಂದು ವೇಳೆ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಪಂದ್ಯಗಳಲ್ಲಿ ಒಂದು ಜಯ ಸಾಧಿಸಿದರೆ, ಮುಂಬೈ ಇಂಡಿಯನ್ಸ್ ತಂಡವು ಎಲಿಮಿನೇಟರ್ ಪಂದ್ಯವಾಡುವುದು ಖಚಿತವಾಗಲಿದೆ. ಏಕೆಂದರೆ ಗುಜರಾತ್ ಟೈಟಾನ್ಸ್ ಮುಂದಿನ ಮ್ಯಾಚ್ನಲ್ಲಿ ಗೆದ್ದರೆ ಒಟ್ಟು ಅಂಕಗಳ ಸಂಖ್ಯೆ 20 ಕ್ಕೇರಲಿದೆ. ಹಾಗೆಯೇ ಆರ್ಸಿಬಿ ಗೆದ್ದರೆ 19 ಪಾಯಿಂಟ್ ಆಗಲಿದೆ. ಇತ್ತ ಮುಂಬೈ ಇಂಡಿಯನ್ಸ್ ಮುಂದಿನ ಮ್ಯಾಚ್ನಲ್ಲಿ ಗೆದ್ದರೂ 18 ಅಂಕಗಳನ್ನು ಮಾತ್ರ ಹೊಂದಲಿದೆ. ಹೀಗಾಗಿ ಆರ್ಸಿಬಿ ಮತ್ತು ಜಿಟಿ ಮುಂದಿನ ಮ್ಯಾಚ್ನಲ್ಲಿ ಗೆಲ್ಲುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಎಲಿಮಿನೇಟರ್ ಪಂದ್ಯವಾಡುವುದು ಖಚಿತವಾಗಲಿದೆ.