IPL 2025: ಫೈನಲ್ ಪಂದ್ಯಕ್ಕೂ ಮುನ್ನ RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಡೌಟ್
IPL 2025 RCB vs PBKS Final: ಇಂಡಿಯನ್ ಪ್ರೀಮಿಯರ್ ಲೀಗ್ನ ಮಹಾಸಮರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂದು ನಡೆಯಲಿರುವ ಐಪಿಎಲ್ ಸೀಸನ್-18ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.
Updated on: Jun 03, 2025 | 7:28 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು (ಜೂ. 3) ನಡೆಯಲಿರುವ ಐಪಿಎಲ್ 2025ರ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಮುಖಾಮುಖಿಯಾಗಲಿದೆ.

ಈ ನಿರ್ಣಾಯಕ ಪಂದ್ಯಕ್ಕೆ ಆರ್ಸಿಬಿ ತಂಡದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್ ಅಲಭ್ಯರಾಗುವ ಸಾಧ್ಯತೆಯಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ಫೀಲ್ಡಿಂಗ್ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಡೇವಿಡ್ ಸೋಮವಾರದವರೆಗೆ ಯಾವುದೇ ಅಭ್ಯಾಸ ನಡೆಸಿಲ್ಲ. ಹೀಗಾಗಿ ಇಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಸಹ ಅವರು ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

ಇತ್ತ ಟಿಮ್ ಡೇವಿಡ್ ಅವರು ಫೈನಲ್ ಪಂದ್ಯವಾಡುವ ಬಗ್ಗೆ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಕೂಡ ಖಚಿತ ಮಾಹಿತಿ ನೀಡಿಲ್ಲ. ಡೇವಿಡ್ ಅವರ ಫಿಟ್ನೆಸ್ ಮೇಲೆ ವೈದ್ಯರು ನಿಗಾವಹಿಸಿದ್ದು, ಮಂಗಳವಾರ ಸಂಜೆಯೊಳಗೆ ಅವರು ಆಡುವ ಪರಿಸ್ಥಿತಿಯಲ್ಲಿದ್ದರೆ ಮಾತ್ರ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮವಾರ ಕೂಡ ಅಭ್ಯಾಸದಿಂದ ಹೊರಗುಳಿದಿರುವ ಕಾರಣ ಟಿಮ್ ಡೇವಿಡ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಆರ್ಸಿಬಿ ಪರ ಆಲ್ರೌಂಡರ್ ಆಗಿ ಲಿಯಾಮ್ ಲಿವಿಂಗ್ಸ್ಟೋನ್ ಕಣಕ್ಕಿಳಿಯಲಿದ್ದಾರೆ ಎನ್ನಬಹುದು. ಏಕೆಂದರೆ ಕಳೆದ ಮ್ಯಾಚ್ನಲ್ಲಿ ಟಿಮ್ ಡೇವಿಡ್ ಬದಲಿಗೆ ಲಿವಿಂಗ್ಸ್ಟೋನ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಅದರಂತೆ ಫೈನಲ್ ಪಂದ್ಯಕ್ಕೆ ಆರ್ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ...

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ 11: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್ಸ್ಟೋನ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ವುಡ್, ಯಶ್ ದಯಾಲ್.
