
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಉಳಿದ ಪಂದ್ಯಗಳಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ 7 ವಿದೇಶಿ ಆಟಗಾರರು ಆಗಮಿಸಿದ್ದಾರೆ. ಅಲ್ಲದೆ ಈ ಎಲ್ಲಾ ಆಟಗಾರರು ಈಗಾಗಲೇ ಅಭ್ಯಾಸವನ್ನು ಸಹ ಆರಂಭಿಸಿದ್ದಾರೆ. ಇವರಲ್ಲಿ ನಾಲ್ವರು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ. ಹಾಗಿದ್ರೆ ಆರ್ಸಿಬಿ ತಂಡವನ್ನು ಕೂಡಿಕೊಂಡಿರುವ 7 ವಿದೇಶಿ ಆಟಗಾರರು ಯಾರೆಲ್ಲಾ ಎಂದು ನೋಡೋಣ...

ಫಿಲ್ ಸಾಲ್ಟ್: ಇಂಗ್ಲೆಂಡ್ ತಂಡದ ಹೊಡಿಬಡಿ ದಾಂಡಿಗ ಫಿಲ್ ಸಾಲ್ಟ್ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ 9 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಬಾರಿಸಿರುವ ಸಾಲ್ಟ್ ಒಟ್ಟು 236 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಕೆಕೆಆರ್ ವಿರುದ್ಧ ಅವರು ಕಣಕ್ಕಿಳಿಯುವ ಸಾಧ್ಯತೆಯಿಲ್ಲ.

ಜೇಕಬ್ ಬೆಥೆಲ್: ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಕೊನೆಯ ಎರಡು ಪಂದ್ಯಗಳಲ್ಲಿ ಆರ್ಸಿಬಿ ಪರ ಇಂಗ್ಲೆಂಡ್ನ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸಿದ್ದರು. ಈ ವೇಳೆ ಒಂದು ಅರ್ಧಶತಕ ಬಾರಿಸಿರುವ ಬೆಥೆಲ್ ಒಟ್ಟು 67 ರನ್ ಕಲೆಹಾಕಿದ್ದಾರೆ. ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಥೆಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಟಿಮ್ ಡೇವಿಡ್: ಆಸ್ಟ್ರೇಲಿಯಾದ ಸ್ಪೋಟಕ ದಾಂಡಿಗ ಟಿಮ್ ಡೇವಿಡ್ ಈ ಬಾರಿ ಆರ್ಸಿಬಿ ಪರ 11 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು ಒಂದು ಅರ್ಧಶತಕದೊಂದಿಗೆ 186 ರನ್ ಕಲೆಹಾಕಿದ್ದಾರೆ. ಹೀಗಾಗಿ ಕೆಕೆಆರ್ ವಿರುದ್ಧ ಕೂಡ ಟಿಮ್ ಡೇವಿಡ್ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಿಯಾಮ್ ಲಿವಿಂಗ್ಸ್ಟೋನ್: ಇಂಗ್ಲೆಂಡ್ನ ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿ ಪರ 7 ಪಂದ್ಯಗಳನ್ನಾಡಿದ್ದು, ಈ ವೇಳೆ 1 ಅರ್ಧಶತಕದೊಂದಿಗೆ ಒಟ್ಟು 87 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಬೌಲಿಂಗ್ ಮೂಲಕ ಪಡೆದಿರುವುದು 2 ವಿಕೆಟ್ ಮಾತ್ರ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಿವಿಂಗ್ಸ್ಟೋನ್ಗೂ ಚಾನ್ಸ್ ಸಿಗುವುದಿಲ್ಲ.

ರೊಮಾರಿಯೊ ಶೆಫರ್ಡ್: ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದ ಬಳಿಕ ಅವರ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಕಾಣಿಸಿಕೊಂಡಿದ್ದರು. ಅಲ್ಲದೆ 4 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶೆಪರ್ಡ್ ಒಂದು ಸ್ಪೋಟಕ ಅರ್ಧಶತಕ ಬಾರಿಸಿದ್ದಲ್ಲದೆ, ಒಂದು ವಿಕೆಟ್ ಅನ್ನು ಸಹ ಕಬಳಿಸಿದ್ದಾರೆ. ಹಾಗಾಗಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರೊಮಾರಿಯೊ ಶೆಫರ್ಡ್ ಕಾಣಿಸಿಕೊಳ್ಳುವುದು ಖಚಿತ.

ನುವಾನ್ ತುಷಾರ: ಶ್ರೀಲಂಕಾ ವೇಗಿ ನುವಾನ್ ತುಷಾರ ಈ ಬಾರಿಯ ಐಪಿಎಲ್ನಲ್ಲಿ ಒಂದೇ ಒಂದು ಪಂದ್ಯವಾಡಿಲ್ಲ. ಅಂದರೆ ಆರ್ಸಿಬಿ ಪರ ಈವರೆಗೆ ಪಾದಾರ್ಪಣೆ ಮಾಡುವ ಅವಕಾಶ ದೊರೆತಿಲ್ಲ. ಇದೀಗ ಆರ್ಸಿಬಿ ತಂಡದ ಉಳಿದ ಪಂದ್ಯಗಳಿಗಾಗಿ ಆಗಮಿಸಿರುವ ತುಷಾರ ಮುಂದಿನ ಮೂರು ಮ್ಯಾಚ್ಗಳಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

ಲುಂಗಿ ಎನ್ಗಿಡಿ: ಸೌತ್ ಆಫ್ರಿಕಾದ ಅನುಭವಿ ವೇಗಿ ಲುಂಗಿ ಎನ್ಗಿಡಿ ಆರ್ಸಿಬಿ ಪರ ಒಂದು ಪಂದ್ಯವಾಡಿದ್ದಾರೆ. ಜೋಶ್ ಹೇಝಲ್ವುಡ್ ಅನುಪಸ್ಥಿತಿಯಲ್ಲಿ ಸಿಎಸ್ಕೆ ವಿರುದ್ಧ ಕಣಕ್ಕಿಳಿದ ಲುಂಗಿ 4 ಓವರ್ಗಳಲ್ಲಿ 30 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ಕೆಕೆಆರ್ ವಿರುದ್ಧ ಕೂಡ ಎನ್ಗಿಡಿ ಕಣಕ್ಕಿಳಿಯುವುದನ್ನು ನಿರೀಕ್ಷಿಸಬಹುದು.

ಜೋಶ್ ಹೇಝಲ್ವುಡ್: ಆಸ್ಟ್ರೇಲಿಯಾ ವೇಗಿ ಜೋಶ್ ಹೇಝಲ್ವುಡ್ ಆರ್ಸಿಬಿ ತಂಡವನ್ನು ಇನ್ನೂ ಸಹ ಕೂಡಿಕೊಂಡಿಲ್ಲ. ಭುಜದ ನೋವಿನಿಂದ ಬಳಲುತ್ತಿರುವ ಅವರು ಭಾರತಕ್ಕೆ ಹಿಂತಿರುಗುವುದು ಬಹುತೇಕ ಖಚಿತವಾಗಿದೆ. ಇದಾಗ್ಯೂ ಅವರು ಲೀಗ್ ಹಂತದ ಪಂದ್ಯಗಳಿಗೆ ಲಭ್ಯರಿರುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಹೇಝಲ್ವುಡ್ ಪ್ಲೇಆಫ್ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.