- Kannada News Photo gallery Cricket photos IPL 2025: Virat Kohli feeling emotional after seeing Fans white jerseys
Virat Kohli: RCB ಅಭಿಮಾನಿಗಳ ಅಭಿಮಾನ ನೋಡಿ ಭಾವುಕರಾದ ವಿರಾಟ್ ಕೊಹ್ಲಿ
IPL 2025 RCB vs KKR: ಇಂಡಿಯನ್ ಪ್ರೀಮಿಯರ್ ಲೀಗ್ನ ( ಐಪಿಎಲ್ 2025) 58ನೇ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಈ ರದ್ದಾಗುವಿಕೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ಸಿಬಿ ) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್ ) ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ.
Updated on:May 18, 2025 | 9:39 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕೆಂಪು ಕೋಟೆ ಶನಿವಾರ ಸಂಪೂರ್ಣ ಶ್ವೇತಮಯವಾಗಿತ್ತು. ಹೀಗೆ ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಶ್ವೇತಮಯವಾಗಿಸಿದ್ದು ವಿರಾಟ್ ಕೊಹ್ಲಿಯ (Virat Kohli) ಅಭಿಮಾನಿಗಳು. ತಮ್ಮ ನೆಚ್ಚಿನ ಆಟಗಾರನಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಗೌರವಯುತ ವಿದಾಯ ಸಿಕ್ಕಿಲ್ಲ ಎಂಬ ಕಾರಣಕ್ಕೆ, ಅಭಿಮಾನಿಗಳು ವೈಟ್ ಜೆರ್ಸಿ ಧರಿಸಿ ಆಗಮಿಸಿದ್ದರು.

ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿಯನ್ನು ತಾವೆಷ್ಟು ಪ್ರೀತಿಸುತ್ತಿದ್ದೇವು ಎಂಬುದನ್ನು ಅಭಿಮಾನಿಗಳು ಸಾರಿ ಹೇಳಿದ್ದರು. ಇತ್ತ ಇಂತಹದೊಂದು ಅಭಿಮಾನವನ್ನು ನೋಡಿದ ವಿರಾಟ್ ಕೊಹ್ಲಿ ಭಾವುಕರಾಗಿ ಕಂಡು ಬಂದರು. ಗ್ಯಾಲರಿ ಪೂರ್ತಿ ವೈಟ್ ಜೆರ್ಸಿ ರಾರಾಜಿಸುತ್ತಿರುವುದು ಬಿಗ್ ಸ್ಕ್ರೀನ್ನಲ್ಲಿ ತೋರಿಸುತ್ತಿದ್ದಂತೆ, ಇತ್ತ ಕೊಹ್ಲಿ ಏಕಾಂತವಾಗಿ ಭಾವುಕತೆಯಿಂದ ನೋಡುತ್ತಾ ಕೂತಿದ್ದರು.

ಆದರೆ ವಿಧಿಯಾಟ, ಮಳೆಯ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಡುವಣ ಪಂದ್ಯವು ರದ್ದಾಯಿತು. ಇಲ್ಲದಿದ್ದರೆ, ಕಿಂಗ್ ಕೊಹ್ಲಿ ಬ್ಯಾಟಿಂಗ್ಗೆ ಬರುತ್ತಿದ್ದಂತೆ ವಿಶೇಷ ಗೌರವ ಸಲ್ಲಿಸಲು ಆರ್ಸಿಬಿ ಫ್ಯಾನ್ಸ್ ನಿರ್ಧರಿಸಿದ್ದರು.

ಇತ್ತ ಆರ್ಸಿಬಿ ಫ್ರಾಂಚೈಸಿ ಕೂಡ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಮಳೆಯಿಂದಾಗಿ ಎಲ್ಲವೂ ಹಾಳಾಯಿತು ಎನ್ನಬಹುದು. ಇದಾಗ್ಯೂ ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಸಹ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.

ಮೇ 23 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ವೇಳೆ ಆರ್ಸಿಬಿ ಅಭಿಮಾನಿಗಳು ಕಿಂಗ್ ಕೊಹ್ಲಿಗೆ ಟೆಸ್ಟ್ ಬೀಳ್ಕೊಡುಗೆ ನೀಡಲು ಮತ್ತೆ ವೈಟ್ ಜೆರ್ಸಿಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಅಲ್ಲದೆ ಆರ್ಸಿಬಿ ಕಡೆಯಿಂದಲೂ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಿಗಲಿದೆ.
Published On - 7:36 am, Sun, 18 May 25
