IPL 2026 Auction: ಬರೋಬ್ಬರಿ 25.2 ಕೋಟಿ ರೂ.ಗೆ ಗ್ರೀನ್ ಹರಾಜು
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಗಾಗಿ ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಹರಾಜಿನಲ್ಲಿ ಬರೋಬ್ಬರಿ 369 ಆಟಗಾರರ ಹೆಸರು ಕಾಣಿಸಿಕೊಂಡಿದೆ. ಇವರಲ್ಲಿ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಭರ್ಜರಿ ಮೊತ್ತಕ್ಕೆ ಹರಾಜಾಗಿದ್ದಾರೆ.
Updated on: Dec 16, 2025 | 2:57 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಬರೋಬ್ಬರಿ 25.20 ಕೋಟಿ ರೂ.ಗೆ ಹರಾಜಾಗಿದ್ದಾರೆ. ಹೀಗೆ ಆಸೀಸ್ ಆಟಗಾರನಿಗೆ ಕೋಟಿ ಮೊತ್ತ ನೀಡಿ ಖರೀದಿಸಿರುವುದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ.

ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಈಗಾಗಲೇ ಐಪಿಎಲ್ಗೆ ವಿದಾಯ ಹೇಳಿದ್ದಾರೆ. ಅವರ ಬದಲಿಗೆ ಗ್ರೀನ್ ಅವರನ್ನು ಖರೀದಿಸಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಪ್ಲ್ಯಾನ್ ರೂಪಿಸಿತ್ತು. ಆದರೆ ಅತ್ತ ಕೆಕೆಆರ್ ಫ್ರಾಂಚೈಸಿಗೆ ಸಿಎಸ್ಕೆ ಕಡೆಯಿಂದ ಭರ್ಜರಿ ಪೈಪೋಟಿ ಎದುರಾಗಿತ್ತು.

ಇದಾಗ್ಯೂ ಅಂತಿಮವಾಗಿ ಬರೋಬ್ಬರಿ 25.20 ಕೋಟಿ ರೂ. ನೀಡುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಕ್ಯಾಮರೋನ್ ಗ್ರೀನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಂತೆ ಗ್ರೀನ್ ಮುಂಬರುವ ಐಪಿಎಲ್ನಲ್ಲಿ ಕೆಕೆಆರ್ ಪರ ಕಣಕ್ಕಿಳಿಯಲಿದ್ದಾರೆ.

ಕ್ಯಾಮರೋನ್ ಗ್ರೀನ್ ಈ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಗ್ರೀನ್, 2024 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದರು. ಇದೀಗ ಮೂರನೇ ತಂಡವಾಗಿ ಕೆಕೆಆರ್ ಪರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.

KKR ತಂಡ: ಅಜಿಂಕ್ಯ ರಹಾನೆ, ಅಂಗ್ಕ್ರಿಶ್ ರಘುವಂಶಿ, ಅನ್ಕುಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣ್ದೀಪ್ ಸಿಂಗ್, ರಿಂಕು ಸಿಂಗ್, ರೋವ್ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.




