
2025 ರ ಐಪಿಎಲ್ಗೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ ಒಂದೊಳ್ಳೆ ತಂಡ ಕಟ್ಟದೆ ಇಡೀ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಚೆನ್ನೈ ಸೂಪರ್ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಹೊರಬಿದಿತ್ತು. ಹೀಗಾಗಿ ಈ ಬಾರಿಯಾದರೂ ಉತ್ತಮ ತಂಡವನ್ನು ಕಟ್ಟುವ ಇರಾದೆಯಲ್ಲಿರುವ ಸಿಎಸ್‌ಕೆ ಫ್ರಾಂಚೈಸಿ, 2026 ಮಿನಿ ಹರಾಜಿಗೂ ಮುನ್ನ ಕೆಲವು ಆಟಗಾರರನ್ನು ಬೇರೆ ತಂಡದಿಂದ ಟ್ರೇಡ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

ಅದರಂತೆ ವರದಿಗಳ ಪ್ರಕಾರ ಸಿಎಸ್‌ಕೆ, ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಸಂಜುಗಾಗಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಬಿಟ್ಟುಕೊಡಲು ಸಿಎಸ್‌ಕೆ ಮುಂದಾಗಿದೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್ ಮಾತ್ರವಲ್ಲದೆ ಗುಜರಾತ್ ಟೈಟಾನ್ಸ್‌ನ ಆಟಗಾರನ ಮೇಲೂ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ಈಗ ಭವಿಷ್ಯದ ಮೇಲೆ ಕಣ್ಣಿಟ್ಟು ತಂಡವನ್ನು ನಿರ್ಮಿಸುವ ಕೆಲಸ ಮಾಡುತ್ತಿದೆ. ಎಂಎಸ್ ಧೋನಿ ನಿವೃತ್ತಿಯಾಗುವ ಮೊದಲು ಬಲಿಷ್ಠ ತಂಡವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಸಿಎಸ್‌ಕೆ ಫ್ರಾಂಚೈಸಿ, ಗುಜರಾತ್ ಟೈಟಾನ್ಸ್‌ನ ಸ್ಟಾರ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಟ್ರೇಡಿಂಗ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ನೋಡುತ್ತಿದೆ. ಆದಾಗ್ಯೂ, ಗುಜರಾತ್ ಟೈಟಾನ್ಸ್ ಸಿಎಸ್‌ಕೆಯ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್ ಸುಂದರ್ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮೂರು ಸ್ವರೂಪಗಳಲ್ಲಿ ಭಾರತೀಯ ತಂಡಕ್ಕಾಗಿ ಆಡುತ್ತಾರೆ. ಇದರ ಜೊತೆಗೆ ಐಪಿಎಲ್‌ನಲ್ಲಿಯೂ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನಿಂದ ಬಿಡುಗಡೆಯಾದ ನಂತರ, ಅವರನ್ನು ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಟೈಟಾನ್ಸ್ 3.2 ಕೋಟಿ ರೂ. ನೀಡಿ ಖರೀದಿಸಿತ್ತು. ಅಲ್ಲದೆ ಉತ್ತಮ ಫಾರ್ಮ್ನಲ್ಲಿರುವ ಅವರನ್ನು ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಟೈಟಾನ್ ಇಲ್ಲ.

2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ವಾಷಿಂಗ್ಟನ್ ಸುಂದರ್, ನಂತರ ಮುಂದಿನ ನಾಲ್ಕು ವರ್ಷಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಳೆದರು. ನಂತರ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿತ್ತು.

ವಾಷಿಂಗ್ಟನ್ ಸುಂದರ್ ಇದುವರೆಗೆ ಐಪಿಎಲ್‌ನಲ್ಲಿ 66 ಪಂದ್ಯಗಳನ್ನು ಆಡಿದ್ದು, 7.69 ರ ಎಕಾನಮಿ ದರದಲ್ಲಿ 39 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಪವರ್‌ಪ್ಲೇನಲ್ಲಿಯೂ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್‌ನಲ್ಲಿ ಇಲ್ಲಿಯವರೆಗೆ 511 ರನ್ ಬಾರಿಸಿದ್ದಾರೆ. ಕಳೆದ ಸೀಸನ್ನಲ್ಲಿ ಉತ್ತಮವಾಗಿ ಆಡಿದ್ದ ಸುಂದರ್ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 166.25 ರ ಸ್ಟ್ರೈಕ್ ರೇಟ್‌ನಲ್ಲಿ 133 ರನ್ ಬಾರಿಸಿದ್ದರು.