Updated on:Feb 25, 2023 | 7:25 PM
ಭಾರತದ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (James Anderson) ಇದೀಗ ಹೊಸ ವಿಶ್ವ ದಾಖಲೆ ಹೊಸ್ತಿಲಲ್ಲಿದ್ದಾರೆ. ಟೀಮ್ ಇಂಡಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವುದರೊಂದಿಗೆ ಅ್ಯಂಡರ್ಸನ್ ಅವರ ವಿಕೆಟ್ ಸಂಖ್ಯೆ 695 ಕ್ಕೇರಿದೆ.
ವಿಶೇಷ ಎಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 700 ಕ್ಕೂ ಅಧಿಕ ವಿಕೆಟ್ ಪಡೆದಿರುವುದು ಕೇವಲ ಇಬ್ಬರು ಬೌಲರ್ಗಳು. ಅವರಿಬ್ಬರಲ್ಲಿ ಒಬ್ಬರ ದಾಖಲೆಯನ್ನು ಮುರಿಯುವತ್ತ ಇದೀಗ ಜೇಮ್ಸ್ ಅ್ಯಂಡರ್ಸನ್ ದಾಪುಗಾಲಿಟ್ಟಿದ್ದಾರೆ.
ಹೌದು, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎಂಬ ವಿಶ್ವ ದಾಖಲೆ ಆಸ್ಟ್ರೇಲಿಯಾದ ಶೇನ್ ವಾರ್ನ್ ಹೆಸರಿನಲ್ಲಿದೆ. ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ 273 ಇನಿಂಗ್ಸ್ ಮೂಲಕ ಒಟ್ಟು 708 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.
ಇದೀಗ 343 ಇನಿಂಗ್ಸ್ ಮೂಲಕ 695 ವಿಕೆಟ್ ಕಬಳಿಸಿರುವ ಜೇಮ್ಸ್ ಅ್ಯಂಡರ್ಸನ್ಗೆ ಶೇನ್ ವಾರ್ನ್ ದಾಖಲೆ ಮುರಿಯಲು ಬೇಕಿರುವುದು ಕೇವಲ 14 ವಿಕೆಟ್ಗಳು ಮಾತ್ರ. ಸದ್ಯ ಅತ್ಯುತ್ತಮ ಫಾರ್ಮ್ನಲ್ಲಿರುವ ಅ್ಯಂಡರ್ಸನ್ ಭಾರತದ ವಿರುದ್ಧದ ಕೊನೆಯ ಮೂರು ಪಂದ್ಯಗಳಲ್ಲೂ ಕಾಣಿಸಿಕೊಳ್ಳಬಹುದು. ಈ ಮೂಲಕ ವಾರ್ನ್ ಅವರ ವಿಶ್ವ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸುವ ಅವಕಾಶ ಅ್ಯಂಡರ್ಸನ್ ಮುಂದಿದೆ.
ಇದಾಗ್ಯೂ ಟೆಸ್ಟ್ ಕ್ರಿಕೆಟ್ನಲ್ಲಿನ ಐತಿಹಾಸಿಕ ದಾಖಲೆ ಬರೆಯಲು ಜೇಮ್ಸ್ ಅ್ಯಂಡರ್ಸನ್ಗೆ 106 ವಿಕೆಟ್ಗಳ ಅವಶ್ಯಕತೆಯಿದೆ. ಅಂದರೆ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವ ದಾಖಲೆ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ.
230 ಟೆಸ್ಟ್ ಇನಿಂಗ್ಸ್ನಲ್ಲಿ 44039 ಚೆಂಡೆಸೆದಿರುವ ಮುತ್ತಯ್ಯ ಮುರಳೀಧರನ್ ಒಟ್ಟು 800 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಎಂಟು ನೂರು ವಿಕೆಟ್ ಉರುಳಿಸಿದ ಏಕೈಕ ಬೌಲರ್ ಆಗಿ ಅಗ್ರಸ್ಥಾನದಲ್ಲಿದ್ದಾರೆ.
ಇದೀಗ 343 ಇನಿಂಗ್ಸ್ಗಳಲ್ಲಿ 39427 ಚೆಂಡೆಸೆದಿರುವ ಜೇಮ್ಸ್ ಅ್ಯಂಡರ್ಸನ್ 695 ವಿಕೆಟ್ಗಳೊಂದಿಗೆ ಅತ್ಯಧಿಕ ವಿಕೆಟ್ ಪಡೆದ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ಜೇಮ್ಸ್ ಅ್ಯಂಡರ್ಸನ್ ತಮ್ಮದಾಗಿಸಿಕೊಂಡಿದ್ದಾರೆ.
Published On - 7:23 pm, Sat, 25 February 23