- Kannada News Photo gallery Cricket photos KL Rahull has been dropped from the India T20 squad for the Asia Cup 2025
KL Rahul: ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಇಲ್ಲ ಚಾನ್ಸ್..!
Asia Cup 2025 KL Rahul: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ 1 ಶತಕ ಹಾಗೂ 3 ಅರ್ಧಶತಕಗಳೊಂದಿಗೆ 539 ರನ್ ಕಲೆಹಾಕಿದ್ದ ಕೆಎಲ್ ರಾಹುಲ್ ಅವರಿಗೆ ಈ ಬಾರಿಯ ಏಷ್ಯಾಕಪ್ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಕಳೆದ ಬಾರಿ ಟಿ20 ವಿಶ್ವಕಪ್ನಲ್ಲೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ರಾಹುಲ್ ಇದೀಗ ಮತ್ತೊಮ್ಮೆ ಅವಕಾಶ ವಂಚಿತರಾಗಿದ್ದಾರೆ.
Updated on: Aug 19, 2025 | 3:00 PM

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹದಿನೈದು ಸದಸ್ಯರುಗಳ ಈ ತಂಡದಲ್ಲಿ ಕನ್ನಡಿಗ ಕೆಎಲ್ ರಾಹುಲ್ಗೆ (KL Rahul) ಸ್ಥಾನ ಲಭಿಸಿಲ್ಲ.

ಮುಂಬರುವ ಏಷ್ಯಾಕಪ್ ಟಿ20 ಸ್ವರೂಪದಲ್ಲಿ ನಡೆಯಲಿದ್ದು, ಹೀಗಾಗಿ ಯುವ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಇದೇ ಕಾರಣದಿಂದಾಗಿ ಕೆಎಲ್ ರಾಹುಲ್ಗೆ ಸ್ಥಾನ ನೀಡಲಾಗಿಲ್ಲ ಎಂದು ತಿಳಿದು ಬಂದಿದೆ. ಬದಲಾಗಿ ವಿಕೆಟ್ ಕೀಪರ್ಗಳಾಗಿ ಸಂಜು ಸ್ಯಾಮ್ಸನ್ ಹಾಗೂ ಜಿತೇಶ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತ ಕೆಎಲ್ ರಾಹುಲ್ ಭಾರತದ ಪರ ಟಿ20 ಪಂದ್ಯವಾಡಿ ವರ್ಷ ಕಳೆದಿದೆ. ಅದರಲ್ಲೂ 2024ರಲ್ಲಿ ನಡೆದ ಟಿ20 ವಿಶ್ವಕಪ್ ಗೆ ರಾಹುಲ್ ಅವರನ್ನು ಆಯ್ಕೆ ಮಾಡಿರಲಿಲ್ಲ. ಇನ್ನು ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲೂ ಕೆಎಲ್ಆರ್ಗೆ ಚಾನ್ಸ್ ನೀಡಿರಲಿಲ್ಲ.

ಇದಾಗ್ಯೂ ಕಳೆದ ಬಾರಿಯ ಐಪಿಎಲ್ನಲ್ಲಿ ಕೆಎಲ್ ರಾಹುಲ್ 539 ರನ್ ಕಲೆಹಾಕಿ ಮಿಂಚಿದ್ದರು. ಹೀಗಾಗಿ ಈ ಬಾರಿಯ ಏಷ್ಯಾಕಪ್ ತಂಡದಲ್ಲಿ ಅವಕಾಶವನ್ನು ನಿರೀಕ್ಷಿಸಲಾಗಿತ್ತು. ಆದರೀಗ ಭಾರತ ಟಿ20 ತಂಡ ಪ್ರಕಟಗೊಂಡಿದ್ದು, ಈ ತಂಡದಲ್ಲಿ ಆವರ ಹೆಸರು ಕಾಣಿಸಿಕೊಂಡಿಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರ ಟಿ20 ಕೆರಿಯರ್ ಅಂತ್ಯ ಎಂದರೆ ತಪ್ಪಾಗಲಾರದು.

ಕೆಎಲ್ ರಾಹುಲ್ ಟೀಮ್ ಇಂಡಿಯಾ ಪರ ಈವರೆಗೆ 72 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 68 ಇನಿಂಗ್ಸ್ ಆಡಿರುವ ಅವರು 2265 ರನ್ ಕಲೆ ಹಾಕಿದ್ದಾರೆ. ಇದರ ನಡುವೆ 2 ಶತಕ ಹಾಗೂ 22 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ಮೂಲಕ ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಏಷ್ಯಾ ಕಪ್ಗೆ ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
