ಆರ್​ಸಿಬಿಯಿಂದ ಗೇಟ್​ಪಾಸ್; ರಣಜಿಯಲ್ಲಿ ತ್ರಿಶತಕ ಸಿಡಿಸಿದ ಯುವ ಆಲ್​ರೌಂಡರ್

Updated on: Nov 14, 2024 | 6:38 PM

Ranji Trophy: ಆರ್‌ಸಿಬಿ ತಂಡದಿಂದ ಬಿಡುಗಡೆಯಾದ ಮಹಿಪಾಲ್ ಲೊಮ್ರೋರ್ ರಣಜಿ ಟ್ರೋಫಿಯಲ್ಲಿ ಅದ್ಭುತ ತ್ರಿಶತಕ ಸಿಡಿಸಿದ್ದಾರೆ. ಇದು ಅವರ ಪ್ರಥಮ ದರ್ಜೆ ಕ್ರಿಕೆಟ್‌ನ ಮೊದಲ ತ್ರಿಶತಕ. ಈ ಸಾಧನೆಯಿಂದ 2025ರ ಐಪಿಎಲ್ ಹರಾಜಿನಲ್ಲಿ ಅವರಿಗೆ ಹೆಚ್ಚಿನ ಬೇಡಿಕೆ ನಿರೀಕ್ಷಿಸಲಾಗಿದೆ. ಲೊಮ್ರೋರ್ ಉತ್ತಮ ಆಲ್‌ರೌಂಡರ್ ಆಗಿದ್ದು, ಐಪಿಎಲ್‌ನಲ್ಲಿ 40 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.

1 / 6
2025ರ ಐಪಿಎಲ್ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದಿದ್ದ ಯುವ ಆಲ್​ರೌಂಡರ್ ಮಹಿಪಾಲ್ ಲೊಮ್ರೋರ್, ಇದೀಗ ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬದ ಬ್ಯಾಟಿಂಗ್‌ ಪ್ರದರ್ಶಿಸಿ, ತ್ರಿಶತಕ ಸಿಡಿಸಿ ಮಿಂಚಿದ್ದಾರೆ. 357 ಎಸೆತಗಳಲ್ಲಿ ತಮ್ಮ ತ್ರಿಶತಕವನ್ನು ಪೂರ್ಣಗೊಳಿಸಿದ ಲೊಮ್ರೋರ್, ತಮ್ಮ ಇನ್ನಿಂಗ್ಸ್​ನಲ್ಲಿ 13 ಸಿಕ್ಸರ್ ಮತ್ತು 25 ಬೌಂಡರಿಗಳನ್ನು ಬಾರಿಸಿದರು.

2025ರ ಐಪಿಎಲ್ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಬಿದಿದ್ದ ಯುವ ಆಲ್​ರೌಂಡರ್ ಮಹಿಪಾಲ್ ಲೊಮ್ರೋರ್, ಇದೀಗ ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬದ ಬ್ಯಾಟಿಂಗ್‌ ಪ್ರದರ್ಶಿಸಿ, ತ್ರಿಶತಕ ಸಿಡಿಸಿ ಮಿಂಚಿದ್ದಾರೆ. 357 ಎಸೆತಗಳಲ್ಲಿ ತಮ್ಮ ತ್ರಿಶತಕವನ್ನು ಪೂರ್ಣಗೊಳಿಸಿದ ಲೊಮ್ರೋರ್, ತಮ್ಮ ಇನ್ನಿಂಗ್ಸ್​ನಲ್ಲಿ 13 ಸಿಕ್ಸರ್ ಮತ್ತು 25 ಬೌಂಡರಿಗಳನ್ನು ಬಾರಿಸಿದರು.

2 / 6

ಎಲೈಟ್ ಗುಂಪಿನ ಬಿ ಪಂದ್ಯದಲ್ಲಿ ಉತ್ತರಾಖಂಡ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ರಾಜಸ್ಥಾನದ ಪರ ಆಡುತ್ತಿರುವ ಮಹಿಪಾಲ್ ಲೊಮ್ರೋರ್ ತ್ರಿಶತಕ ಬಾರಿಸಿದ ಸಾಧನೆ ಮಾಡಿದ್ದು, ಇದು ಮಹಿಪಾಲ್ ಲೊಮ್ರೋರ್ ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದ ಮೊದಲ ಟ್ರಿಪಲ್ ಶತಕವಾಗಿದೆ.

3 / 6

ವಾಸ್ತವವಾಗಿ ಮೇಲೆ ಹೇಳಿದಂತೆ ಆರ್​ಸಿಬಿ ತಂಡದಿಂದ ಹೊರಬಿದ್ದಿರುವ ಮಹಿಪಾಲ್ ಲೊಮ್ರೋರ್ ಸರಿಯಾದ ಸಮಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದು, ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಹೆಚ್ಚಿನ ಮೊತ್ತ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

4 / 6

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರತುಪಡಿಸಿ, ಮಹಿಪಾಲ್ ಲೊಮ್ರೋರ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೂಡ ಆಡಿದ್ದಾರೆ. ಅವರು ಐಪಿಎಲ್‌ನಲ್ಲಿ ಒಟ್ಟು 40 ಪಂದ್ಯಗಳನ್ನು ಆಡಿದ್ದು, 18.17ರ ಸರಾಸರಿಯಲ್ಲಿ 527 ರನ್ ಗಳಿಸಿದ್ದಾರೆ. ಇದರಲ್ಲಿ ಅರ್ಧಶತಕವೂ ಸೇರಿದೆ.

5 / 6

ಕಳೆದ ಎರಡು ಸೀಸನ್‌ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿತ್ತು. ಆದರೆ ಲೊಮ್ರೋರ್​ಗೆ ಯಾವುದೇ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಕಳೆದ ಐಪಿಎಲ್​ನಲ್ಲಿ 10 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಅವರು 15.62 ರ ಸರಾಸರಿಯಲ್ಲಿ ಕೇವಲ 125 ರನ್ ಗಳಿಸಿದ್ದರು. ಹಾಗೆಯೇ 2023 ರ ಐಪಿಎಲ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ, ಒಂದು ಅರ್ಧ ಶತಕದೊಂದಿಗೆ 135 ರನ್ ಗಳಿಸಿದ್ದರು.

6 / 6

ಮಹಿಪಾಲ್ ಲೊಮ್ರೋರ್ ಆಲ್​ರೌಂಡರ್ ಆಗಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದುವರೆಗೆ 55 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಸ್ಟ್ ಎ ನಲ್ಲಿ 11 ವಿಕೆಟ್ ಹಾಗೂ ಟಿ20ಯಲ್ಲಿ 9 ವಿಕೆಟ್ ಪಡೆದಿದ್ದಾರೆ. ಆದರೆ, ಇದುವರೆಗೆ ಐಪಿಎಲ್‌ನಲ್ಲಿ ಅವರ ಹೆಸರಿನಲ್ಲಿ ಕೇವಲ 1 ವಿಕೆಟ್ ಇದೆ.

Loading...
Unable to load recommendations.
Follow Us