Matheesha Pathirana: ಅತೀ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದ ಮಥೀಶ ಪತಿರಾಣ
Matheesha Pathirana: ಯುಎಇನಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಶ್ರೀಲಂಕಾದ ಯುವ ವೇಗದ ಬೌಲರ್ ಮಥೀಶ ಪತಿರಾಣ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶಾರ್ಜಾ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಅತೀ ವೇಗದಲ್ಲಿ ಚೆಂಡೆಸೆಯುವ ಮೂಲಕ ಪತಿರಾಣ ಸಂಚಲನ ಸೃಷ್ಟಿಸಿದ್ದಾರೆ.
Updated on: Feb 12, 2024 | 10:58 AM

ಶಾರ್ಜಾದಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ 30ನೇ ಪಂದ್ಯದಲ್ಲಿ ಮಥೀಶ ಪತಿರಾಣ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಅತೀ ವೇಗದಲ್ಲಿ ಚೆಂಡೆಸುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಮತ್ತು ಡೆಸರ್ಟ್ ವೈಪರ್ಸ್ ತಂಡಗಳು ಮುಖಾಮುಖಿಯಾಗಿತ್ತು.

ಟಾಸ್ ಗೆದ್ದ ಡೆಸರ್ಟ್ ವೈಪರ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಶಾರ್ಜಾ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಡೆಸರ್ಟ್ ವೈಪರ್ಸ್ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ರನ್ಗಳಿಸಲು ಪರದಾಡಿದರು. ಅದರಲ್ಲೂ ಪತಿರಾಣರ ವೇಗದ ಎಸೆತಗಳನ್ನು ಎದುರಿಸಲು ತಿಣುಕಾಡಿದರು.

145 ರಿಂದ 150 ರ ಅಸುಪಾಸಿನ ವೇಗದ ಚೆಂಡೆಸೆಯುವ ಮೂಲಕ ಮಥೀಶ ಪತಿರಾಣ ಶಾರ್ಜಾ ವಾರಿಯರ್ಸ್ ಬ್ಯಾಟರ್ಗಳನ್ನು ಕಾಡಿದರು. ಅದರಲ್ಲೂ ತಮ್ಮ ಮೊದಲ ಓವರ್ನಲ್ಲಿ 3ನೇ ಎಸೆತವನ್ನು 152.1 kmph ವೇಗದಲ್ಲಿ ಎಸೆದರು. ಈ ಮೂಲಕ ಇಂಟರ್ನ್ಯಾಷನಲ್ ಲೀಗ್ ಟಿ20 ಯಲ್ಲಿ ಅತ್ಯಂತ ವೇಗದ ಚೆಂಡೆಸೆದ ದಾಖಲೆಯನ್ನು ಮಥೀಶ ಪತಿರಾಣ ತಮ್ಮದಾಗಿಸಿಕೊಂಡರು.

ಇನ್ನು ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ಮಥೀಶ ಪತಿರಾಣ 28 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ಈ ಭರ್ಜರಿ ಬೌಲಿಂಗ್ ಪರಿಣಾಮ ಶಾರ್ಜಾ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 121 ರನ್ಗಳಿಸಲಷ್ಟೇ ಶಕ್ತರಾದರು. ಈ ಸುಲಭ ಗುರಿಯನ್ನು 12.5 ಓವರ್ಗಳಲ್ಲಿ ಚೇಸ್ ಮಾಡಿ ಡೆಸರ್ಟ್ ವೈಪರ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಅಂದಹಾಗೆ ಐಪಿಎಲ್ನಲ್ಲಿ ಅತೀ ವೇಗದ ಚೆಂಡೆಸೆದ ದಾಖಲೆ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರಿನಲ್ಲಿದೆ. 2011 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಟೈಟ್ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ವಿರುದ್ಧ 157.7 kmph ವೇಗದಲ್ಲಿ ಚೆಂಡೆಸೆದು ದಾಖಲೆ ನಿರ್ಮಿಸಿದ್ದಾರೆ.

ಇದೀಗ 21 ವರ್ಷದ ಮಥೀಶ ಪತಿರಾಣ 152.1 kmph ವೇಗದಲ್ಲಿ ಚೆಂಡೆಸೆದು ಸಂಚಲನ ಸೃಷ್ಟಿಸಿದ್ದಾರೆ. ಈ ಮೂಲಕ ಐಪಿಎಲ್ಗಾಗಿ ಭರ್ಜರಿ ತಯಾರಿದ್ದಾರೆ. ಅದರಂತೆ ಸಿಎಸ್ಕೆ ಪರ ಕಣಕ್ಕಿಳಿಯಲಿರುವ ಪತಿರಾಣ ಕಡೆಯಿಂದ ಈ ಬಾರಿ ಬೆಂಕಿ ಬೌಲಿಂಗ್ ಅನ್ನು ನಿರೀಕ್ಷಿಸಬಹುದು.
