- Kannada News Photo gallery Cricket photos Mohammed Shami's Ranji Performance:Could He Join Team India for Australia Tour?
ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್: ಆಸ್ಟ್ರೇಲಿಯಾಕ್ಕೆ ಹಾರಲಿದ್ದಾರೆ ಮೊಹಮ್ಮದ್ ಶಮಿ..!
Mohammed Shami: ಗಾಯದಿಂದ ಚೇತರಿಸಿಕೊಂಡ ಮೊಹಮ್ಮದ್ ಶಮಿ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆಯಾಗುವ ಸಾಧ್ಯತೆಯಿದೆ. ಅವರ ಫಿಟ್ನೆಸ್ ಮತ್ತು ಫಾರ್ಮ್ ಮೇಲೆ ಬಿಸಿಸಿಐ ನಿಗಾ ವಹಿಸಿದ್ದು, ಶಮಿಗೆ ಆಸ್ಟ್ರೇಲಿಯಾ ಟಿಕೆಟ್ ಸಿಗುವ ಸಾಧ್ಯತೆಗಳಿವೆ.
Updated on: Nov 14, 2024 | 7:48 PM

ಬಾರ್ಡರ್-ಗವಾಸ್ಕರ್ ಟ್ರೋಫಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಪರ್ತ್ ತಲುಪಿದ್ದು, ಅಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈಗಾಗಲೇ ತಂಡದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ 18 ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಈ ತಂಡದ ಭಾಗವಾಗಿಲ್ಲ.

ಬಹಳ ದಿನಗಳಿಂದ ಗಾಯದಿಂದ ಬಳಲುತ್ತಿದ್ದ ಶಮಿ ತಂಡವನ್ನು ಪ್ರಕಟಿಸುವವರೆಗೂ ಫಿಟ್ ಆಗಿರಲಿಲ್ಲ. ಆದರೆ, ಈಗ ಪೂರ್ಣ ಚೇತರಿಸಿಕೊಂಡಿರುವ ಶಮಿ ಮತ್ತೆ ಅಖಾಡಕ್ಕೆ ಮರಳಿದ್ದು, ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಮಧ್ಯಪ್ರದೇಶದ ವಿರುದ್ಧ ಉತ್ತಮವಾಗಿ ಬೌಲಿಂಗ್ ಮಾಡಿದ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಬಹುದು ಎಂದು ವರದಿಯಾಗಿದೆ.

ಒಂದು ವರ್ಷದ ನಂತರ ಅಖಾಡಕ್ಕೆ ಮರಳಿದ ಶಮಿ, ಬಂಗಾಳದ ಪರ ಕಣಕ್ಕಿಳಿದಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 19 ಓವರ್ ಬೌಲ್ ಮಾಡಿದ್ದು, ನಾಲ್ಕು ಮೇಡನ್‌ಗಳೊಂದಿಗೆ ನಾಲ್ಕು ವಿಕೆಟ್ ಪಡೆದರು. ಹೀಗಿರುವಾಗ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಭಾರತ ತಂಡಕ್ಕೆ ಸವಾಲಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೊಹಮ್ಮದ್ ಶಮಿ ಸೇವೆ ಸಿಗಬಹುದು ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ಆದರೆ, ಇದಕ್ಕೂ ಮುನ್ನ ಶಮಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಪರೀಕ್ಷೆ ಎದುರಾಗಲಿದೆ. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಹೇಗೆ ಬೌಲಿಂಗ್ ಮಾಡುತ್ತಾರೆ ಹಾಗೂ ಪಂದ್ಯದ ನಂತರ ಶಮಿ ಮತ್ತೆ ಇಂಜುರಿಗೆ ತುತ್ತಾಗಲಿದ್ದಾರಾ ಎಂಬುದರ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಒಂದು ವೇಳೆ ಶಮಿ, ಎಲ್ಲಾ ಮಾನದಂಡಗಳನ್ನು ಪೂರೈಸಿದರೆ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರುವುದು ಬಹುತೇಕ ಖಚಿತವಾಗಿದೆ.

ಇದಕ್ಕೆ ಪೂರಕವಾಗಿ ರಣಜಿಯಲ್ಲಿ ಆಡುತ್ತಿರುವ ಶಮಿ ಅವರ ಫಿಟ್ನೆಸ್ ಹಾಗೂ ಫಾರ್ಮ್ ಗಮನಿಸಲು ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯ ಅಜಯ್ ಮತ್ತು ಎನ್‌ಸಿಎ ವೈದ್ಯಕೀಯ ತಂಡದ ಮುಖ್ಯಸ್ಥ ನಿತಿನ್ ಪಟೇಲ್ ಮೈದಾನಕ್ಕೆ ಬಂದಿದ್ದರು ಎಂದು ವರದಿಯಾಗಿದೆ. ಈ ಮೂವರು ಇದೀಗ ಶಮಿ ಅವರ ಕಾರ್ಯಕ್ಷಮತೆಯನ್ನು ಬಿಸಿಸಿಐ ಸಲ್ಲಿಸಲಿದ್ದು, ಆ ಬಳಿಕ ಶಮಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಮಧ್ಯಪ್ರದೇಶ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯವು ನವೆಂಬರ್ 16 ರಂದು ಕೊನೆಗೊಳ್ಳಲಿದೆ. ಇತ್ತ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ನವೆಂಬರ್ 22 ರಿಂದ ಆಡಲಿದೆ. ಒಂದು ವೇಳೆ ಶಮಿ ಆಸ್ಟ್ರೇಲಿಯಾಕ್ಕೆ ಹೋದರೆ, ಅವರು ಪ್ರಧಾನ ಮಂತ್ರಿ 11 ವಿರುದ್ಧ ಎರಡು ದಿನಗಳ ಹಗಲು-ರಾತ್ರಿ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ. ಆ ನಂತರ ಆಸೀಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
