
2026 ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಆತಿಥೇಯ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ. ಟೂರ್ನಿಯ ಮೊದಲ ದಿನವೇ ಅಮೆರಿಕ ತಂಡವನ್ನು ಭಾರತ ತಂಡ ಎದುರಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದಿಂದಾಗಿ ಇಡೀ ವಿಶ್ವಕಪ್ನಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಬಿಸಿಸಿಐ ಕೂಡ ಅವರ ಬದಲಿಯಾಗಿ ಅನುಭವಿ ವೇಗಿಯನ್ನು ತಂಡಕ್ಕೆ ಕರೆತಂದಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾದರು. ಇದರಿಂದಾಗಿ ಹರ್ಷಿತ್ ಮೈದಾನವನ್ನು ಅರ್ಧದಲ್ಲೇ ತೊರೆದಿದ್ದರು. ಇದೀಗ ಹರ್ಷಿತ್ ಲಭ್ಯತೆಯ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಅವರ ಗಾಯ ಗಂಭೀರವಾಗಿರುವುದರಿಂದ ಅವರ ಚೇತರಿಕೆಗೆ ಸಮಯಬೇಕಿದೆ. ಹೀಗಾಗಿ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಟ್ಟು, ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಅನುಭವಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಭಾರತೀಯ ತಂಡದಲ್ಲಿ ಹರ್ಷಿತ್ ಬದಲಿಗೆ ಸ್ಥಾನ ಪಡೆಯಲಿದ್ದಾರೆ . ಆದಾಗ್ಯೂ, ಈ ವಿಷಯದ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಪಂದ್ಯಕ್ಕೆ ಒಂದು ದಿನದ ಮೊದಲು ಪತ್ರಿಕಾಗೋಷ್ಠಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್, ಹರ್ಷಿತ್ ಪ್ರಸ್ತುತ ಪಂದ್ಯಾವಳಿಯಿಂದ ಹೊರಗುಳಿದಿಲ್ಲ ಎಂದು ಸ್ಪಷ್ಟಪಡಿಸಿದರಾದರೂ, ಹರ್ಷಿತ್ ಫಿಟ್ ಇಲ್ಲ ಎಂಬುದನ್ನು ಖಚಿತಪಡಿಸಿದ್ದರು.

ವರದಿಯ ಪ್ರಕಾರ ಮೊಹಮ್ಮದ್ ಸಿರಾಜ್ ಬಹಳ ಸಮಯದ ಬಳಿಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಟಿ20 ತಂಡದಿಂದ ಹೊರಗುಳಿದಿದ್ದ ಸಿರಾಜ್, ಜುಲೈ 2024 ರಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಕೊನೆಯ ಬಾರಿಗೆ ಈ ಸ್ವರೂಪದಲ್ಲಿ ಭಾರತ ಪರ ಆಡಿದ್ದರು. ಒಟ್ಟಾರೆಯಾಗಿ, ಸಿರಾಜ್ ಭಾರತ ಪರ 16 ಟಿ20 ಪಂದ್ಯಗಳನ್ನು ಆಡಿದ್ದು, 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಟೀಂ ಇಂಡಿಯಾದಿಂದ ಹೊರಗುಳಿದಿರುವ ಸಿರಾಜ್ ಪ್ರಸ್ತುತ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2025 ಮತ್ತು 2026 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಹೈದರಾಬಾದ್ ಪರ ಆಡಿದ್ದ ಸಿರಾಜ್ ಆಡಿದ ನಾಲ್ಕು ಪಂದ್ಯಗಳಲ್ಲಿ 5.81 ರ ಎಕಾನಮಿ ದರದಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದರು. ಹೀಗಾಗಿ ಸಿರಾಜ್ಗೆ ಭಾರತ ತಂಡದಲ್ಲಿ ಮತ್ತೆ ಆಡುವ ಅವಕಾಶ ಸಿಕ್ಕಿದೆ.