IND vs AUS: ತಂಡದಲ್ಲಿ ಇರದ ವಿರಾಟ್ ಕೊಹ್ಲಿಯೇ ನಂಬರ್ ೧
Virat Kohli Records: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭರ್ಜರಿ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಪ್ರಸ್ತುತ ಭಾರತ ಟಿ20 ತಂಡದಲ್ಲಿ ಇರದಿದ್ದರೂ, ಕಿಂಗ್ ಕೊಹ್ಲಿ ಇಂಡೊ-ಆಸೀಸ್ ರನ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
Updated on:Oct 28, 2025 | 12:03 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 12ನೇ ಟಿ20 ಸರಣಿಗೆ ವೇದಿಕೆ ಸಿದ್ಧವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಬಾರಿಯ ಟಿ20 ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಾಗುತ್ತದೆ. ಈ ಪಂದ್ಯಗಳ ಮೂಲಕ ಅತ್ಯಧಿಕ ರನ್ ಗಳಿಸಿದರೆ ಗ್ಲೆನ್ ಮ್ಯಾಕ್ಸ್ವೆಲ್ ವಿರಾಟ್ ಕೊಹ್ಲಿಯ ದಾಖಲೆ ಮುರಿಯಬಹುದು.

ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಟುವಣ ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 23 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 22 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 794 ರನ್ ಕಲೆಹಾಕಿದ್ದಾರೆ.

ಆದರೆ ಈ ಬಾರಿಯ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದಿಲ್ಲ. ಏಕೆಂದರೆ 2024ರ ಟಿ20 ವಿಶ್ವಕಪ್ ಬೆನ್ನಲ್ಲೇ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಿಂಗ್ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ.

ಇತ್ತ ವಿರಾಟ್ ಕೊಹ್ಲಿ ನಿವೃತ್ತಿಯಾಗಿರುವ ಕಾರಣ ಮುಂಬರುವ ಪಂದ್ಯಗಳ ಮೂಲಕ ಭಾರತ-ಆಸ್ಟ್ರೇಲಿಯಾ ಟಿ20 ಸರಣಿಯ ರನ್ ಸರದಾರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ಗೆ ಅಗ್ರಸ್ಥಾನಕ್ಕೇರಬಹುದು. ಅದಕ್ಕಾಗಿ ಅವರು ಬರೋಬ್ಬರಿ 221 ರನ್ಗಳನ್ನು ಕಲೆಹಾಕಬೇಕಿದೆ.

ಭಾರತದ ವಿರುದ್ಧ ಈವರೆಗೆ 22 ಟಿ20 ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್ವೆಲ್ ಒಟ್ಟು 574 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಭರ್ಜರಿ ಶತಕ ಹಾಗೂ 2 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಅದರಂತೆ ಮುಂಬರುವ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಭರ್ಜರಿ ಪ್ರದರ್ಶನ ನೀಡಿ 221 ರನ್ಗಳಿಸಿದರೆ ಇಂಡೊ-ಆಸೀಸ್ ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
Published On - 12:03 pm, Tue, 28 October 25




