Updated on:Jun 01, 2023 | 6:34 PM
ಮೊಣಕಾಲಿನ ನೋವಿನೊಂದಿಗೆ ಇಡೀ ಐಪಿಎಲ್ ಮುಗಿಸಿದ್ದ ಎಂಎಸ್ ಧೋನಿಗೆ ಇದೀಗ ಯಶಸ್ವಿಯಾಗಿ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಟಿವಿ9 ಭಾರತವರ್ಷ್ ವರದಿ ಮಾಡಿದೆ. ಐಪಿಎಲ್ ಫೈನಲ್ ಮುಗಿದ ಬೆನ್ನಲ್ಲೇ ಧೋನಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಹೋಗಿ ಮೇ 31 ರಂದು ಮೊಣಕಾಲಿನ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದರು. ಇದೀಗ ಒಂದು ದಿನದ ನಂತರ ಅಂದರೆ, ಜೂನ್ 1 ರ ಬೆಳಿಗ್ಗೆ ಧೋನಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ 31 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ ಲೀಗ್‌ನ ಮೊದಲ ಪಂದ್ಯದಲ್ಲಿ ಧೋನಿ ಈ ಗಾಯಕ್ಕೆ ಒಳಗಾಗಿದ್ದರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡುವ ಉತ್ಸಾಹದಲ್ಲಿ ಧೋನಿ ತಮ್ಮ ಮೊಣಕಾಲಿನ ಬಗ್ಗೆ ಕಾಳಜಿ ವಹಿಸಿರಲಿಲ್ಲ. ಆದರೆ, ಈ ನಡುವೆ ಧೋನಿ ಕೆಲವೊಮ್ಮೆ ನೋವಿನಿಂದ ಮೈದಾನದಲ್ಲಿ ಕುಂಟುತ್ತ ನಡೆಯುತ್ತಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು.
ಸಿಕ್ಕಿರುವ ಮಾಹಿತಿ ಪ್ರಕಾರ ಧೋನಿಯ ಆಪರೇಷನ್ ಅನ್ನು ಡಾ.ದಿನ್ ಶಾ ಪರ್ದಿವಾಲಾ ಮಾಡಿದ್ದಾರೆ. ಡಾ.ಪರ್ದಿವಾಲಾ ಅವರು ಸೆಂಟರ್ ಫಾರ್ ಸ್ಪೋರ್ಟ್ಸ್ ಮೆಡಿಸಿನ್ ಮುಖ್ಯಸ್ಥರಾಗಿದ್ದು, ರಿಷಬ್ ಪಂತ್ ಅವರ ಶಸ್ತ್ರಚಿಕಿತ್ಸೆಯಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸಿದ್ದರು. ಧೋನಿ ಪ್ರಸ್ತುತ ಮೊಣಕಾಲಿನ ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಈ ಶಸ್ತ್ರಚಿಕಿತ್ಸೆಗೂ ಮುನ್ನ ಧೋನಿಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಈ ಫೋಟೋದಲ್ಲಿ ಕಾರಿನಲ್ಲಿ ಕುಳಿತಿರುವ ಧೋನಿ ತಮ್ಮ ಕೈನಲ್ಲಿ ಭಗವದ್ಗೀತೆಯನ್ನು ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ.
ಸದ್ಯ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಧೋನಿ ಇದರಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳ ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ನಿವೃತ್ತಿಯ ಬಗ್ಗೆ ಮಾತನಾಡಿದ್ದ ಧೋನಿ ಅದರ ಬಗ್ಗೆ ನಿರ್ಧರಿಸಲು ಇನ್ನು 6 ರಿಂದ 7 ತಿಂಗಳು ಸಮಯವಿದೆ ಎಂದು ಹೇಳಿದ್ದರು. ಹಾಗಾಗಿ ಅಷ್ಟರಲ್ಲಿ ಧೋನಿ ಪೂರ್ಣ ಫಿಟ್ ಇದ್ದರೆ ಇನ್ನೊಂದು ಸೀಸನ್ ಆಡುವ ಸಾಧ್ಯತೆಗಳಿವೆ.
Published On - 6:32 pm, Thu, 1 June 23