ಆಸ್ಟ್ರೇಲಿಯಾ ತಂಡವು ಏಕದಿನ ಸರಣಿ ಆಡಲು ಶುರುವಾಗಿ 54 ವರ್ಷಗಳೇ ಕಳೆದಿವೆ. ಆದರೆ ಹಿಂದೆಂದೂ ಕಂಡರಿಯದ, ಕೇಳರಿಯದ ರೀತಿಯಲ್ಲಿ ಇದೇ ಮೊದಲ ಬಾರಿಗೆ ಕೆಟ್ಟ ದಾಖಲೆಯೊಂದನ್ನು ಬರೆದಿದೆ. ಅದು ಕೂಡ ಪಾಕಿಸ್ತಾನ್ ಬೌಲರ್ಗಳ ಮುಂದೆ ಮಂಡಿಯೂರು ಮೂಲಕ ಎಂಬುದೇ ಅಚ್ಚರಿ.
1970 ರಿಂದ ಏಕದಿನ ಸರಣಿ ಆಡುತ್ತಿರುವ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಒಂದೇ ಒಂದು ಅರ್ಧಶತಕ ಬಾರಿಸದೇ ಸರಣಿಯೊಂದನ್ನು ಕೊನೆಗೊಳಿಸಿದೆ. ಅಂದರೆ ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾದ ಯಾವುದೇ ಬ್ಯಾಟರ್ ಅರ್ಧಶತಕ ಬಾರಿಸಿಲ್ಲ.
ಆಸ್ಟ್ರೇಲಿಯಾ ತಂಡವು ಈವರೆಗೆ 200 ಕ್ಕೂ ಅಧಿಕ ಏಕದಿನ ಸರಣಿಗಳನ್ನಾಡಿದೆ. ಈ ಪ್ರತಿ ಸರಣಿಗಳಲ್ಲೂ ಆಸ್ಟ್ರೇಲಿಯಾದ ಯಾವುದಾದರೂ ಒಬ್ಬ ಬ್ಯಾಟರ್ ಅರ್ಧಶತಕ ಬಾರಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಸರಣಿಯೊಂದರಲ್ಲಿ ಹಾಫ್ ಸೆಂಚುರಿ ಸಿಡಿಸುವಲ್ಲಿ ಆಸ್ಟ್ರೇಲಿಯಾ ಬ್ಯಾಟರ್ಗಳು ವಿಫಲರಾಗಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.
ಇಂತಹದೊಂದು ಕೆಟ್ಟ ದಾಖಲೆ ಬರೆಸಿರುವುದು ಪಾಕ್ ವೇಗಿಗಳು. ಏಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡದ ವೇಗಿಗಳಾದ ಹ್ಯಾರಿಸ್ ರೌಫ್, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಹಾಗೂ ಮೊಹಮ್ಮದ್ ಹಸ್ನೈನ್ ಜೊತೆಗೂಡಿ ಒಟ್ಟು 26 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಎರಡು ಬಾರಿ ಆಸೀಸ್ ಪಡೆಯನ್ನು 165 ರನ್ಗಳ ಒಳಗೆ ಆಲೌಟ್ ಮಾಡಿದೆ.
ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತ್ತು. ಇನ್ನು ಮೂರನೇ ಪಂದ್ಯದಲ್ಲಿ 8 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ 22 ವರ್ಷಗಳ ಬಳಿಕ ಪಾಕಿಸ್ತಾನ್ ತಂಡವು ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದುಕೊಂಡಿದೆ.