- Kannada News Photo gallery Cricket photos PAK vs AFG 1st T20I Mohammad Nabi's all round brilliance helped Afghanistan script their first ever win over Pakistan
PAK vs AFG: ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಪಾಕ್ಗೆ ಮಣ್ಣುಮುಕ್ಕಿಸಿ ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಜಯ ಸಾಧಿಸಿದ ಅಫ್ಘಾನಿಸ್ತಾನ
Pakistan vs Afghanistan 1st T20I: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನ ತಂಡ ಇತಿಹಾಸ ರಚಿಸಿತು.
Updated on:Mar 25, 2023 | 9:40 AM

ಕ್ರಿಕೆಟ್ ಶಿಶು ಎಂದು ಕರೆಯಲ್ಪಡುವ ಅಫ್ಘಾನಿಸ್ತಾನ ತಂಡ ಬಲಿಷ್ಠ ಪಾಕಿಸ್ತಾನ ತಂಡಕ್ಕೆ ಟಿ20 ಕ್ರಿಕೆಟ್ನಲ್ಲಿ ಮಣ್ಣುಮುಕ್ಕಿಸಿ ಚೊಚ್ಚಲ ಗೆಲುವು ಕಂಡಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಪ್ರಥಮ ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ರಶೀದ್ ಖಾನ್ ಪಡೆ ಇತಿಹಾಸ ರಚಿಸಿತು. ಈ ಮೂಲಕ ಅಫ್ಘಾನಿಸ್ತಾನ ಮೊಟ್ಟ ಮೊದಲ ಬಾರಿಗೆ ಪಾಕಿಸ್ತಾನ ತಂಡದ ವಿರುದ್ಧ ಗೆದ್ದು ಸಂಭ್ರಮಿಸಿತು.

ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಿತು. ಆದರೆ, ಅಫ್ಘಾನಿಸ್ತಾನದ ಶಿಸ್ತಿನ ಬೌಲಿಂಗ್ ಮುಂದೆ ರನ್ ಗಳಿಸಲು ಪರದಾಡಿತು. 50 ರನ್ಗು ಮೊದಲೇ 5 ವಿಕೆಟ್ ಕಳೆದುಕೊಂಡಿತು.

ಮೊಹಮ್ಮದ್ ಹ್ಯಾರಿಸ್ (6), ಶಫೀಕ್ (0), ಅಜಮ್ ಖಾನ್ (0), ಸೈಮ್ ಅಯುಬ್ (17), ತಯಾಬ್ ತಾಹಿರ್ (16), ಇಮಾದ್ ವಾಸೀಂ 18 ರನ್ಗೆ ಔಟಾದರೆ ನಾಯಕ ಶದಾಬ್ ಖಾನ್ 12 ರನ್ಗೆ ನಿರ್ಗಮಿಸಿದರು.

ಅಫ್ಘಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 92 ರನ್ ಗಳಿಸಿತಷ್ಟೆ. ಅಫ್ಘಾನಿಸ್ತಾನ ಪರ ಫಾರುಖ್, ಮುಜೀಬ್ ಹಾಗೂ ಮೊಹಮ್ಮದ್ ಮಬಿ 2 ವಿಕೆಟ್ ಪಡೆದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ ಗೆಲ್ಲಲೇ ಬೇಕೆಂದು ಎಚ್ಚರಿಕೆಯ ಬ್ಯಾಟಿಂಗ್ ಆರಂಭಿಸಿತು. ಹೀಗಿದ್ದರೂ 45 ರನ್ ಆಗುವ ಹೊತ್ತಿಗೆ 4 ವಿಕೆಟ್ಗಳು ಪತನಗೊಂಡವು. ಗುರ್ಬಜ್ 16, ಜರ್ದನನ್ 9, ಗುಲ್ಬದಿನ್ ನಬಿ 0 ಹಾಗೂ ಕರೀಮ್ ಜನತ್ 7 ರನ್ಗೆ ಔಟಾದರು.

ಆದರೆ, ತನ್ನ ಅನುಭವವನ್ನು ದಾರೆ ಎರೆದ ಮೊಹಮ್ಮದ್ ನಬಿ ಗೆಲುವಿಗೆ ಹೋರಾಟ ನಡೆಸಿದರು. ಪಾಕ್ ಬೌಲಿಂಗ್ ಪಡೆಯನ್ನ ದಿಟ್ಟವಾಗಿ ಎದುರಿಸಿದ ನಬಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. 38 ಎಸೆತಗಳಲ್ಲಿ ಅಜೇಯ 38 ರನ್ ಬಾರಿಸಿದರು. ಇವರಿಗೆ ಸಾಥ್ ನೀಡಿದ ನಜಿಬುಲ್ಲ ಜರ್ದನ್ 17 ರನ್ ಬಾರಿಸಿದರು.

ಅಫ್ಘಾನಿಸ್ತಾನ 17.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 98 ರನ್ ಬಾರಿಸುವ ಮೂಲಕ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಕಂಡಿತು. ಮೊಹಮ್ಮದ್ ನಬಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇದೀಗ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಫ್ಘಾನ್ 1-0 ಮುನ್ನಡೆ ಪಡೆದುಕೊಂಡಿದೆ.
Published On - 9:40 am, Sat, 25 March 23
