- Kannada News Photo gallery Cricket photos PAK vs ENG Babar Azam Failed again in Multan Test 18th innings without fifty kannada news
PAK vs ENG: ಸತತ 18ನೇ ಇನ್ನಿಂಗ್ಸ್ನಲ್ಲೂ ಫೇಲ್; ತಂಡಕ್ಕೆ ಹೊರೆಯಾದ ಮಾಜಿ ನಾಯಕ ಬಾಬರ್
Babar Azam: ವರ್ಷದ ಹಿಂದೆ ಪಾಕಿಸ್ತಾನದ ಬ್ಯಾಟಿಂಗ್ ಜೀವಾಳ ಎನಿಸಿದ್ದ ಬಾಬರ್ ಆಝಂ ಈಗ ತಂಡಕ್ಕೆ ಹೊರೆಯಾಗುತ್ತಿರುವಂತೆ ಕಾಣುತ್ತಿದೆ. ಮುಲ್ತಾನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ಬಾಬರ್ ಆಝಂ ಎರಡನೇ ಇನ್ನಿಂಗ್ಸ್‌ನಲ್ಲಿಯೂ ವಿಫಲರಾಗಿ ಮತ್ತೊಮ್ಮೆ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
Updated on: Oct 10, 2024 | 8:34 PM

ಪಾಕ್ ತಂಡದ ಮಾಜಿ ನಾಯಕ ಬಾಬರ್ ಆಝಂಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಒಂದೆಡೆ ತಂಡದಲ್ಲಿ ಬಾಬರ್ ಪ್ರಭಾವ ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ ಅವರ ಫಾರ್ಮ್ ದಿನೇದಿನೇ ಪಾತಾಳಕ್ಕೆ ಕುಸಿಯುತ್ತಿದೆ. ಕಳೆದೊಂದು ವರ್ಷದಿಂದ ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಾಬರ್ಗೆ ಇದುವರೆಗೆ ಯಾವುದೇ ಯಶಸ್ಸು ಸಿಕ್ಕಿಲ್ಲ.

ವರ್ಷದ ಹಿಂದೆ ಪಾಕಿಸ್ತಾನದ ಬ್ಯಾಟಿಂಗ್ ಜೀವಾಳ ಎನಿಸಿದ್ದ ಬಾಬರ್ ಆಝಂ ಈಗ ತಂಡಕ್ಕೆ ಹೊರೆಯಾಗುತ್ತಿರುವಂತೆ ಕಾಣುತ್ತಿದೆ. ಮುಲ್ತಾನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ಬಾಬರ್ ಆಝಂ ಎರಡನೇ ಇನ್ನಿಂಗ್ಸ್‌ನಲ್ಲಿಯೂ ವಿಫಲರಾಗಿ ಮತ್ತೊಮ್ಮೆ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ಪಂದ್ಯದ ನಾಲ್ಕನೇ ದಿನವಾದ ಅಕ್ಟೋಬರ್ 10 ರ ಗುರುವಾರ, ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 823 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 267 ರನ್‌ಗಳ ಮುನ್ನಡೆ ಗಳಿಸಿತು. ಇತ್ತ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ಅಲ್ಪ ಮೊತ್ತಕ್ಕೆ ಕುಸಿದಿದೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಅಬ್ದುಲ್ಲಾ ಶಫೀಕ್ ಹಾಗೂ ನಾಯಕ ಶಾನ್ ಮಸೂದ್ ಬೇಗನೇ ಪೆವಿಲಿಯನ್ಗೆ ಸೇರಿಕೊಂಡರು.

ಈ ವೇಳೆ ಕ್ರೀಸ್ಗೆ ಬಂದ ಬಾಬರ್ ಆಝಂ ದೊಡ್ಡ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಮುಲ್ತಾನ್‌ನಂತಹ ಫ್ಲಾಟ್ ಪಿಚ್‌ನಲ್ಲಿ ಇದು ಅಷ್ಟು ಕಷ್ಟಕರವಾಗಿರಲಿಲ್ಲ. ಆದರೆ ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ ಬಾಬರ್ ಕೇವಲ 5 ರನ್ ಗಳಿಸಿ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿಯೂ ಬಾಬರ್ ಕೇವಲ 30 ರನ್‌ಗಳಿಗೆ ಸುಸ್ತಾಗಿದ್ದರು.

ಈ ಮೂಲಕ ಬಾಬರ್ಗೆ ಸತತ 18 ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿಯೂ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಬಾಬರ್ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ನೀಡಿದ್ದ ಸುಲಭ ಕ್ಯಾಚ್ ಅನ್ನು ಬಾಬರ್ ಕೈಚೆಲ್ಲಿದರು.

ದಿನದ ಮೊದಲ ಸೆಷನ್‌ನಲ್ಲಿಯೇ ಜೋ ರೂಟ್ ಅವರ ಸುಲಭ ಕ್ಯಾಚ್ ಅನ್ನು ಬಾಬರ್ ಕೈಬಿಟ್ಟರು. ಆಗ ರೂಟ್ 186 ರನ್ ಗಳಿಸಿ ಆಡುತ್ತಿದ್ದರು. ಇದರ ಪರಿಣಾಮ ರೂಟ್ ಅದ್ಭುತ ದ್ವಿಶತಕ ಗಳಿಸಿ 262 ರನ್ ಗಳಿಸಿ ಔಟಾದರು. ಮತ್ತೊಂದೆಡೆ, ಹ್ಯಾರಿ ಬ್ರೂಕ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತ್ರಿಶತಕದ ಇನ್ನಿಂಗ್ಸ್ ಆಡಿದರು.

ಇನ್ನು ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ.. ಆತಿಥೇಯ ಪಾಕ್ ತಂಡ ಸೋಲಿನ ಸುಳಿಗೆ ಸಿಲುಕಿದೆ. ಈಗಾಗಲೇ ತಂಡ ಪ್ರಮುಖ 6 ವಿಕೆಟ್ ಕಳೆದುಕೊಂಡಿದೆ. ಕಳೆದ ಮೂರೂವರೆ ವರ್ಷಗಳಿಂದ ತವರಿನಲ್ಲಿ ಪಾಕಿಸ್ತಾನ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಅಂದಿನಿಂದ, ಪಾಕಿಸ್ತಾನ ತವರಿನಲ್ಲಿ 10 ಟೆಸ್ಟ್ ಪಂದ್ಯಗಳನ್ನು ಆಡಿದೆ ಆದರೆ ಒಂದನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಪೈಕಿ 6ರಲ್ಲಿ ಸೋತಿದ್ದು, 4ರಲ್ಲಿ ಡ್ರಾ ಆಗಿದೆ.



















