100 ಓವರ್‌ಗಳಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಪ್ರಸಿದ್ಧ್ ಕೃಷ್ಣ
India vs England 2nd Test: ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 587 ರನ್ ಕಲೆಹಾಕಿದರೆ, ಇಂಗ್ಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 407 ರನ್ಗಳಿಸಿ ಆಲೌಟ್ ಆಗಿತ್ತು. ಇನ್ನು ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 427 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಅದರಂತೆ ಇದೀಗ ಇಂಗ್ಲೆಂಡ್ ತಂಡವು ಕೊನೆಯ ಇನಿಂಗ್ಸ್ನಲ್ಲಿ 608 ರನ್ಗಳ ಗುರಿ ಪಡೆದುಕೊಂಡಿದೆ.
Updated on: Jul 06, 2025 | 11:05 AM

ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಮುಕ್ತಾಯದ ವೇಳೆ ಟೀಮ್ ಇಂಡಿಯಾ ವೇಗಿ ಪ್ರಸಿದ್ಧ್ ಕೃಷ್ಣ ಒಟ್ಟು 16 ಓವರ್ಗಳನ್ನು ಎಸೆದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ 13 ಓವರ್ ಬೌಲಿಂಗ್ ಮಾಡಿದ್ದ ಪ್ರಸಿದ್ಧ್, ದ್ವಿತೀಯ ಇನಿಂಗ್ಸ್ನಲ್ಲಿ 3 ಓವರ್ಗಳನ್ನು ಎಸೆದಿದ್ದಾರೆ.

ಈ 16 ಓವರ್ಗಳೊಂದಿಗೆ ಪ್ರಸಿದ್ಧ್ ಕೃಷ್ಣ ಟೆಸ್ಟ್ ಕ್ರಿಕೆಟ್ನಲ್ಲಿ 100 ಓವರ್ಗಳನ್ನು ಪೂರೈಸಿದ್ದಾರೆ. ಈವರೆಗೆ 5 ಟೆಸ್ಟ್ ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ ವೇಗಿ 9 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಎಸೆದಿರುವುದು ಬರೋಬ್ಬರಿ 636 ಎಸೆತಗಳು. ಅಂದರೆ 106 ಓವರ್ಗಳು. ಈ ಮೂಲಕ ನೀಡಿರುವುದು ಬರೋಬ್ಬರಿ 535 ರನ್ಗಳು.

ಇದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ 100 ಓವರ್‌ಗಳಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಕಳಪೆ ದಾಖಲೆಯೊಂದು ಪ್ರಸಿದ್ಧ್ ಕೃಷ್ಣ ಪಾಲಾಗಿದೆ. ಇದಕ್ಕೂ ಮುನ್ನ ಈ ಹೀನಾಯ ದಾಖಲೆ ಇದ್ದದ್ದು ಟೀಮ್ ಇಂಡಿಯಾದ ಮಾಜಿ ವೇಗಿಯ ಹೆಸರಿನಲ್ಲಿ ಎಂಬುದು ವಿಶೇಷ.

ಭಾರತದ ಪರ 9 ಟೆಸ್ಟ್ ಪಂದ್ಯಗಳನ್ನಾಡಿರುವ ವರುಣ್ ಆರೋನ್ ಮೊದಲ 100 ಓವರ್‌ಗಳಲ್ಲಿ 480 ರನ್ಗಳನ್ನು ನೀಡಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಆರಂಭಿಕ ನೂರು ಓವರ್‌ಗಳಲ್ಲಿ ಅತೀ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕಳಪೆ ದಾಖಲೆಯನ್ನು ವರುಣ್ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಪ್ರಸಿದ್ಧ್ ಕೃಷ್ಣ ಮುರಿದಿದ್ದಾರೆ. ಅದು ಕೂಡ 100 ಓವರ್‌ಗಳಲ್ಲಿ ಬರೋಬ್ಬರಿ 510 ರನ್ಗಳನ್ನು ನೀಡುವ ಮೂಲಕ ಎಂಬುದು ವಿಶೇಷ. ಅಂದರೆ ಪ್ರಸಿದ್ಧ್ ತನ್ನ ಟೆಸ್ಟ್ ಕೆರಿಯರ್ನ ಮೊದಲ 600 ಎಸೆತಗಳಲ್ಲಿ 510 ರನ್ಗಳನ್ನು ನೀಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ 100 ಓವರ್‌ಗಳಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು 5 ಟೆಸ್ಟ್ ಪಂದ್ಯಗಳ 9 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಪ್ರಸಿದ್ಧ್ ಕೃಷ್ಣ ಈವರೆಗೆ 13 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ ಈ ವೇಳೆ ಪ್ರತಿ ಓವರ್ಗೆ 5.05 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹೀಗಾಗಿ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಉತ್ತಮ ಬೌಲಿಂಗ್ ಸಂಘಟಿಸದಿದ್ದರೆ ಮುಂದಿನ ಪಂದ್ಯದಿಂದ ಹೊರಬೀಳುವುದು ಖಚಿತ ಎನ್ನಬಹುದು.




