
ಅಫ್ಘಾನಿಸ್ತಾನ್ ತಂಡದ ಆರಂಭಿಕ ದಾಂಡಿಗ ರಹಮಾನುಲ್ಲಾ ಗುರ್ಬಾಝ್ ಭಾರತದ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಧರ್ಮಶಾಲಾದ ಹೆಚ್.ಪಿ.ಸಿ.ಎ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗುರ್ಬಾಝ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ... (PC: gettyimages)

ಅತ್ಯಂತ ವೇಗದ ಶತಕ: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 50ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಗುರ್ಬಾಝ್ ಪಾತ್ರರಾಗಿದ್ದಾರೆ. ಈ ಹಿಂದೆ ಮೊಹಮ್ಮದ್ ಶಝಾದ್ ಹೆಸರಲ್ಲಿದ್ದ (72 ಎಸೆತಗಳು) ದಾಖಲೆಯನ್ನು ರಹಮಾನುಲ್ಲಾ ಗುರ್ಬಾಝ್ ಮುರಿದಿದ್ದಾರೆ. (PC: gettyimages)

ಎರಡನೇ ಅತ್ಯಂತ ವೇಗದ ಶತಕ: ಭಾರತ ತಂಡದ ವಿರುದ್ಧ ಏಕದಿನ ಪಂದ್ಯವೊಂದರಲ್ಲಿ ದಾಖಲಾದ ಎರಡನೇ ಅತ್ಯಂತ ವೇಗದ ಶತಕ ಇದಾಗಿದೆ. 2005ರಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ 45 ಎಸೆತಗಳಲ್ಲಿ ಶತಕ ಗಳಿಸಿದ್ದು ಸರ್ವಶ್ರೇಷ್ಠ ದಾಖಲೆಯಾಗಿದೆ. ಇದೀಗ 48 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಗುರ್ಬಾಝ್ ಟೀಮ್ ಇಂಡಿಯಾ ವಿರುದ್ಧ ಅತೀ ವೇಗದ ಶತಕ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: gettyimages)

ಮೊದಲ ಬ್ಯಾಟರ್: ಟೀಮ್ ಇಂಡಿಯಾ ವಿರುದ್ಧ ಭಾರತದಲ್ಲಿ ಏಕದಿನ ಶತಕ ಸಿಡಿಸಿದ ಅಫ್ಘಾನಿಸ್ತಾನದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ಕೂಡ ರಹಮಾನುಲ್ಲಾ ಗುರ್ಬಾಝ್ ಪಾಲಾಗಿದೆ. ಇದಕ್ಕೂ ಮುನ್ನ ಅಫ್ಘಾನ್ ತಂಡ ಯಾವುದೇ ಬ್ಯಾಟರ್ ಭಾರತದಲ್ಲಿ ಭಾರತದ ವಿರುದ್ಧ ಶತಕ ಸಿಡಿಸಿದ ಇತಿಹಾಸ ಇರಲಿಲ್ಲ. (PC: gettyimages)

ಎರಡನೇ ಬ್ಯಾಟರ್: ಟೀಮ್ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 50 ಕ್ಕಿಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ 2ನೇ ವಿದೇಶಿ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನೂ ಕೂಡ ರಹಮಾನುಲ್ಲಾ ಗುರ್ಬಾಝ್ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ (45 ಎಸೆತಗಳು) ಅಗ್ರಸ್ಥಾನದಲ್ಲಿದ್ದಾರೆ. (PC: gettyimages)