- Kannada News Photo gallery Cricket photos Ranji Trophy 2023: Hanuma Vihari Bats Left-Hand After Wrist Fracture Kannada News zp
Hanuma Vihari: ಮೂಳೆ ಮುರಿದರೂ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿದ ಹನುಮ ವಿಹಾರಿ
Ranji Trophy 2023: ಮೂಳೆ ಮುರಿತಕ್ಕೊಳಗಾಗಿದ್ದರೂ ತಂಡಕ್ಕಾಗಿ ಬ್ಯಾಂಡೇಜ್ ಕಟ್ಟಿ ಕಣಕ್ಕಿಳಿದ ಹನುಮ ವಿಹಾರಿಯ ಜವಾಬ್ದಾರಿಯುತ ಆಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Updated on: Feb 01, 2023 | 5:29 PM

ಇಂದೋರ್ನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ 4ನೇ ಕ್ವಾರ್ಟರ್ ಫೈನಲ್ ಪಂದ್ಯವು ಹನುಮ ವಿಹಾರಿಯ ದಿಟ್ಟತನದ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಮಧ್ಯಪ್ರದೇಶ ಹಾಗೂ ಆಂಧ್ರ ಪ್ರದೇಶ ತಂಡಗಳು ಮುಖಾಮುಖಿಯಾಗಿತ್ತು. ಅದರಂತೆ ಟಾಸ್ ಗೆದ್ದ ಮಧ್ಯಪ್ರದೇಶ ಆಂಧ್ರ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಆದರೆ ಆಂಧ್ರಪ್ರದೇಶ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ರಿಕ್ಕಿ ಭುಯಿ (149) ಹಾಗೂ ಕರಣ್ ಶಿಂಧೆ (110) ಶತಕ ಸಿಡಿಸಿ ಮಿಂಚಿದ್ದರು. ಆದರೆ ಇವರ ನಿರ್ಗಮನದ ಬೆನ್ನಲ್ಲೇ ಆಂಧ್ರ ತಂಡವು ದಿಢೀರ್ ಕುಸಿತಕ್ಕೊಳಗಾಯಿತು. ಅದರಲ್ಲೂ ಪಂದ್ಯದ ಅವೇಶ್ ಖಾನ್ ಎಸೆದ ಬೌನ್ಸರ್ಗೆ ಆಂಧ್ರ ತಂಡ ನಾಯಕ ಹನುಮ ವಿಹಾರಿ ಕೈಗೆ ಗಂಭೀರ ಗಾಯವಾಗಿತ್ತು.

ನೋವಿನಿಂದ ಒದ್ದಾಡಿದ ಹನುಮ ವಿಹಾರಿ ಮೈದಾನ ತೊರೆದಿದ್ದರು. ಅಲ್ಲದೆ ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ಮಣಿಕಟ್ಟಿನ ಮೂಳೆ ಮುರಿತಕ್ಕೊಳಗಾಗಿರುವುದು ಕಂಡು ಬಂದಿದೆ. ಹೀಗಾಗಿ ವೈದ್ಯರು 6 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ.

ಆದರೆ ಇತ್ತ ಆಂಧ್ರ ತಂಡವು ದಿಢೀರ್ ಕುಸಿತಕ್ಕೊಳಗಾಗಿರುವುದನ್ನು ಗಮನಿಸಿದ ಹನುಮ ವಿಹಾರಿ ಮತ್ತೆ ಪ್ಯಾಡ್ ಕಟ್ಟಿದ್ದಾರೆ. ಅಲ್ಲದೆ 11ನೇ ಆಟಗಾರನಾಗಿ ಮತ್ತೆ ಬ್ಯಾಟಿಂಗ್ಗೆ ಮರಳಿದ್ದಾರೆ. ಆದರೆ ಬಲಗೈ ಮಣಿಕಟ್ಟು ಮುರಿತಕ್ಕೊಳಗಾಗಿದ್ದ ಕಾರಣ ಎಂದಿನಂತೆ ಬಲಗೈ ಬ್ಯಾಟಿಂಗ್ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಎಡಗೈ ಬ್ಯಾಟಿಂಗ್ ಶೈಲಿಯಲ್ಲೇ ದಿಟ್ಟತನದಿಂದಲೇ ಬೌಲರ್ಗಳನ್ನು ಎದುರಿಸಿದ್ದಾರೆ.

16 ರನ್ಗಳಿಸಿದ್ದ ವೇಳೆ ಮೈದಾನ ತೊರೆದಿದ್ದ ಹನುಮ ವಿಹಾರಿ ಆ ಬಳಿಕ ಬಂದು ರಕ್ಷಣಾತ್ಮಕ ಆಟವಾಡಿದರು. ಈ ಮೂಲಕ ತಂಡವು ಬೇಗನೆ ಆಲೌಟ್ ಆಗುವುದನ್ನು ತಡೆದರು. ಅದರಲ್ಲೂ ಕೊನೆಯ ವಿಕೆಟ್ನಲ್ಲಿ 26 ರನ್ಗಳ ಜೊತೆಯಾಟದ ಕೊಡುಗೆ ನೀಡಿದರು.

ನೋವಿನ ನಡುವೆ ಎಡಗೈಯಲ್ಲೇ ಬ್ಯಾಟಿಂಗ್ ಮುಂದುವರೆಸಿದ್ದ ಹುನಮ ವಿಹಾರಿ 57 ಎಸೆತಗಳಲ್ಲಿ 27 ರನ್ ಕಲೆಹಾಕಿದ್ದ ವೇಳೆ ಎಲ್ಬಿಡಬ್ಲ್ಯೂ ಆದರು. ಇದರೊಂದಿಗೆ ಆಂಧ್ರಪ್ರದೇಶ ತಂಡ ಮೊದಲ ಇನಿಂಗ್ಸ್ 379 ರನ್ಗಳೊಂದಿಗೆ ಅಂತ್ಯವಾಯ್ತು.

ಇದೀಗ ಮೂಳೆ ಮುರಿತಕ್ಕೊಳಗಾಗಿದ್ದರೂ ತಂಡಕ್ಕಾಗಿ ಬ್ಯಾಂಡೇಜ್ ಕಟ್ಟಿ ಕಣಕ್ಕಿಳಿದ ಹನುಮ ವಿಹಾರಿಯ ಜವಾಬ್ದಾರಿಯುತ ಆಟಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಆಂಧ್ರ ತಂಡದ ನಾಯಕನ ಈ ದಿಟ್ಟ ನಡೆಗೆ ಕ್ರಿಕೆಟ್ ಪ್ರೇಮಿಗಳು ಬಹುಪರಾಕ್ ಅಂದಿದ್ದಾರೆ.



















