Rashid Khan: ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದ ರಶೀದ್ ಖಾನ್
Rashid Khan Records: ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಅಫ್ಘಾನಿಸ್ತಾನ್ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಸರಣಿಯಲ್ಲಿ ಒಟ್ಟು 8 ವಿಕೆಟ್ ಕಬಳಿಸುವ ಮೂಲಕ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆ ದಾಖಲೆಗಳಲ್ಲಿ ಒಂದು ವಿಶ್ವ ದಾಖಲೆ ಎಂಬುದು ವಿಶೇಷ.
Updated on: Mar 19, 2024 | 8:58 AM

ಶಾರ್ಜಾದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದ ಮೂಲಕ ರಶೀದ್ ಖಾನ್ (Rashid Khan) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ತಟಸ್ಥ ಮೈದಾನದಲ್ಲಿ ಸ್ಪಿನ್ ಮೋಡಿ ಮಾಡುವ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದ ರಶೀದ್ ಖಾನ್ ಕೇವಲ 12 ರನ್ ನೀಡಿ 1 ವಿಕೆಟ್ ಕಬಳಿಸಿದರು.

ಈ ಒಂದು ವಿಕೆಟ್ನೊಂದಿಗೆ ತಟಸ್ಥ ಮೈದಾನದಲ್ಲಿ 100 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರು ಮಾಡದ ವಿಶೇಷ ಸಾಧನೆಯನ್ನು ಅಫ್ಘಾನ್ ಸ್ಪಿನ್ನರ್ ತಮ್ಮದಾಗಿಸಿಕೊಂಡರು.

ಅಲ್ಲದೆ ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಒಟ್ಟು 8 ವಿಕೆಟ್ ಕಬಳಿಸಿ ಮಿಂಚಿರುವ ರಶೀದ್ ಖಾನ್, ಟಿ20 ಕ್ರಿಕೆಟ್ನಲ್ಲಿ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಮೂರನೇ ಸ್ಥಾನದಲ್ಲಿ ನ್ಯೂಝಿಲೆಂಡ್ನ ಇಶ್ ಸೋಧಿ ಇದ್ದರು. 107 ಟಿ20 ಅಂತಾರಾಷ್ಟ್ರೀಯ ಇನಿಂಗ್ಸ್ ಆಡಿರುವ ಸೋಧಿ ಒಟ್ಟು 132 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಇದೀಗ ನ್ಯೂಝಿಲೆಂಡ್ ಸ್ಪಿನ್ನರ್ನನ್ನು ಅಫ್ಘಾನ್ ಬೌಲರ್ ಹಿಂದಿಕ್ಕಿದ್ದಾರೆ.

ಅಫ್ಘಾನಿಸ್ತಾನ್ ಪರ 85 ಟಿ20 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ರಶೀದ್ ಖಾನ್ ಇದುವರೆಗೆ 138 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ನ್ಯೂಝಿಲೆಂಡ್ ವೇಗಿ ಟಿಮ್ ಸೌಥಿ. ಕಿವೀಸ್ ಪರ 120 ಟಿ20 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಸೌಥಿ ಒಟ್ಟು 157 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಹಾಗೆಯೇ ದ್ವಿತೀಯ ಸ್ಥಾನದಲ್ಲಿ ಶಕೀಬ್ ಅಲ್ ಹಸನ್ ಇದ್ದಾರೆ. ಬಾಂಗ್ಲಾದೇಶ್ ತಂಡದ ಮಾಜಿ ನಾಯಕ ಶಕೀಬ್ 115 ಟಿ20 ಇನಿಂಗ್ಸ್ಗಳಿಂದ 140 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಅಂತಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

ಇದೀಗ 138 ವಿಕೆಟ್ಗಳೊಂದಿಗೆ ರಶೀದ್ ಖಾನ್ ಮೂರನೇ ಸ್ಥಾನಕ್ಕೇರಿದ್ದು, ಮುಂಬರುವ ಟಿ20 ವಿಶ್ವಕಪ್ನಲ್ಲಿ 3 ವಿಕೆಟ್ ಕಬಳಿಸಿದರೆ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಬಹುದು. ಹಾಗೆಯೇ 20 ವಿಕೆಟ್ ಪಡೆದರೆ ಟಿಮ್ ಸೌಥಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶ ರಶೀದ್ ಖಾನ್ ಮುಂದಿದೆ.
