- Kannada News Photo gallery Cricket photos Ravichandran Ashwin Records: Bowlers with most wickets in fourth innings
Ravichandran Ashwin: ಶತಕದಂಚಿನಲ್ಲಿ ರವಿಚಂದ್ರನ್ ಅಶ್ವಿನ್
Ravichandran Ashwin Records: ಚೆನ್ನೈ ಟೆಸ್ಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ರವಿಚಂದ್ರನ್ ಅಶ್ವಿನ್ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಹೊಸ ಇತಿಹಾಸ ಬರೆಯಲಿದ್ದಾರೆ. ಅದು ಸಹ ಒಂದು ವಿಕೆಟ್ ಕಬಳಿಸುವ ಮೂಲಕ. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಇನಿಂಗ್ಸ್ನಲ್ಲಿ ಮೂರಂಕಿ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಳ್ಳಲು ಅಶ್ವಿನ್ಗೆ ಕೇವಲ ಒಂದು ವಿಕೆಟ್‌ನ ಅವಶ್ಯಕತೆಯಿದೆ.
Updated on: Sep 23, 2024 | 9:03 AM

ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ ರೌಂಡರ್ ಆಟದೊಂದಿಗೆ ಮಿಂಚಿದ್ದ ರವಿಚಂದ್ರನ್ ಅಶ್ವಿನ್ ಇದೀಗ ಶತಕದಂಚಿನಲ್ಲಿದ್ದಾರೆ. ಅದು ಸಹ ನಾಲ್ಕನೇ ಇನಿಂಗ್ಸ್ನಲ್ಲಿ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎಂಬುದು ವಿಶೇಷ.

ಅಂದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅಥವಾ ಕೊನೆಯ ಇನಿಂಗ್ಸ್ನಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಲು ಅಶ್ವಿನ್ಗೆ ಒಂದೇ ಒಂದು ವಿಕೆಟ್‌ನ ಅವಶ್ಯಕತೆ ಇದೆ. ಈವರೆಗೆ 4ನೇ ಇನಿಂಗ್ಸ್ನಲ್ಲಿ 35 ಬಾರಿ ಬೌಲಿಂಗ್ ಮಾಡಿರುವ ಅಶ್ವಿನ್ ಒಟ್ಟು 99 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ನಾಲ್ಕನೇ ಇನಿಂಗ್ಸ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

ಇದೀಗ 99 ವಿಕೆಟ್‌ಗಳನ್ನು ಹೊಂದಿರುವ ಅಶ್ವಿನ್ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್ನಲ್ಲಿ ಒಂದು ವಿಕೆಟ್ ಪಡೆದರೆ ಶತಕದ ಸಾಧನೆ ಮಾಡಬಹುದು. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ದಾಖಲೆ ಬರೆದ ವಿಶ್ವದ 6ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.

ಈ ವಿಶೇಷ ವಿಶ್ವ ದಾಖಲೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಶೇನ್ ವಾರ್ನ್. ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ನಾಲ್ಕನೇ ಇನಿಂಗ್ಸ್ನಲ್ಲಿ 53 ಬಾರಿ ಬೌಲ್ ಮಾಡಿದ್ದಾರೆ. ಈ ವೇಳೆ ಒಟ್ಟು 138 ವಿಕೆಟ್ ಕಬಳಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಇನ್ನು ಶೇನ್ ವಾರ್ನ್ ನಂತರದ ಸ್ಥಾನಗಳಲ್ಲಿ ನಾಥನ್ ಲಿಯಾನ್ (119), ರಂಗನಾ ಹೆರಾತ್ (115), ಮುತ್ತಯ್ಯ ಮುರಳೀಧರನ್ (106) ಹಾಗೂ ಗ್ಲೆನ್ ಮೆಕ್ ಗ್ರಾಥ್ (103) ಇದ್ದು, ಇದೀಗ ಈ ಸಾಧನೆ ಮಾಡಿದ 6ನೇ ಬೌಲರ್ ಎನಿಸಿಕೊಳ್ಳಲು ಅಶ್ವಿನ್ ಗೆ ಒಂದು ವಿಕೆಟ್‌ನ ಅವಶ್ಯಕತೆ ಇದೆ. ಹೀಗಾಗಿ ಕಾನ್ಪುರ ಟೆಸ್ಟ್‌ನಲ್ಲಿ ರವಿಚಂದ್ರನ್ ಅಶ್ವಿನ್ ಕಡೆಯಿಂದ ಭರ್ಜರಿ ದಾಖಲೆ ನಿರೀಕ್ಷಿಸಬಹುದು.
