- Kannada News Photo gallery Cricket photos Rishabh Pant and Yashasvi Jaiswal in the reckoning for Team India's Test Vice Captaincy
ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ನಡುವೆ ಉಪನಾಯಕತ್ವಕ್ಕಾಗಿ ಪೈಪೋಟಿ
ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ಮತ್ತು ಉಪನಾಯಕ ಬದಲಾಗುವುದು ಬಹುತೇಕ ಖಚಿತವಾಗಿದೆ. ಟೀಮ್ ಇಂಡಿಯಾ ಪರ ಸ್ಥಿರ ಪ್ರದರ್ಶನ ನೀಡುವ ಆಟಗಾರರಿಗೆ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ ಪಟ್ಟ ನೀಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದ್ದು, ಉಪನಾಯಕನ ಸ್ಥಾನಕ್ಕಾಗಿ ರಿಷಭ್ ಪಂತ್ ಅಥವಾ ಯಶಸ್ವಿ ಜೈಸ್ವಾಲ್ ಅನ್ನು ಪರಿಗಣಿಸುವ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಚರ್ಚಿಸಿದೆ.
Updated on: Jan 13, 2025 | 8:54 AM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತವಾಗಿದೆ. ಅದರಲ್ಲೂ ಟೆಸ್ಟ್ ತಂಡದ ನಾಯಕ ಬದಲಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಂದರೆ ಪ್ರಸ್ತುತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಕೈ ಬಿಡುವುದು ಬಹುತೇಕ ಖಚಿತ ಎನ್ನಬಹುದು.

ಇನ್ನು ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈ ಬಿಟ್ಟರೆ, ನಾಯಕ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೇ ಉತ್ತರ ಸಿಕ್ಕಿದೆ. ಹೌದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಜಸ್ಪ್ರೀತ್ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

ಈ ಹಿಂದೆ ಟೆಸ್ಟ್ ತಂಡದ ಉಪನಾಯಕರಾಗಿದ್ದ ಬುಮ್ರಾ ಅವರಿಗೆ ನಾಯಕತ್ವ ನೀಡಿದರೆ, ಟೀಮ್ ಇಂಡಿಯಾಗೆ ಹೊಸ ವೈಸ್ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ಭಾರತ ಟೆಸ್ಟ್ ತಂಡದ ಮುಂದಿನ ಉಪನಾಯಕ ಯಾರೆಂಬುದು ಈಗ ದೊಡ್ಡ ಕುತೂಹಲ.

ಈ ಕುತೂಹಲಕಾರಿ ಪ್ರಶ್ನೆಗೆ ಸದ್ಯ ಎರಡು ಹೆಸರುಗಳು ಕೇಳಿ ಬರುತ್ತಿವೆ. ಅವರೇ... ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್. ಭಾನುವಾರ ನಡೆದ ಬಿಸಿಸಿಐ ಆಯ್ಕೆ ಸಮಿತಿ ಸಭೆಯಲ್ಲಿ ಸ್ಥಿರ ಪ್ರದರ್ಶನ ನೀಡುವ ಆಟಗಾರರನ್ನೇ ನಾಯಕ ಮತ್ತು ಉಪನಾಯಕರನ್ನಾಗಿ ಆಯ್ಕೆ ಮಾಡಬೇಕೆಂಬ ಅಭಿಪ್ರಾಯ ಮುಂದಿಡಲಾಗಿದೆ. ಇದೇ ವೇಳೆ ರಿಷಭ್ ಪಂತ್ ಅಥವಾ ಯಶಸ್ವಿ ಜೈಸ್ವಾಲ್ಗೆ ವೈಸ್ ಕ್ಯಾಪ್ಟನ್ ಪಟ್ಟ ನೀಡುವ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಅಥವಾ ರಿಷಭ್ ಪಂತ್ ಉಪನಾಯಕರಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿ ಮೊದಲ ಪಂದ್ಯವು ಲೀಡ್ಸ್ನಲ್ಲಿ ಜರುಗಿದರೆ, ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ ಆತಿಥ್ಯವಹಿಸಲಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಹಾಗೆಯೇ ನಾಲ್ಕನೇ ಪಂದ್ಯಕ್ಕೆ ಮ್ಯಾಚೆಂಸ್ಟರ್ ಆತಿಥ್ಯವಹಿಸಲಿದ್ದು, ಐದನೇ ಪಂದ್ಯವು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಜರುಗಲಿದೆ.



















